ADVERTISEMENT

ಹಾಪ್‌ಕಾಮ್ಸ್‌ ಆನ್‌ಲೈನ್ ಸೇವೆ ಆರಂಭ

ಗ್ರಾಹಕರ ಮನೆಗೆ ಪೂರೈಕೆಯಾಗಲಿದೆ ಹಣ್ಣು–ತರಕಾರಿ

ಮನೋಹರ್ ಎಂ.
Published 26 ಮೇ 2021, 21:47 IST
Last Updated 26 ಮೇ 2021, 21:47 IST
ಕೋರಮಂಗಲದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು–ತರಕಾರಿ ವಿತರಿಸುತ್ತಿರುವ ಹಾಪ್‌ಕಾಮ್ಸ್‌ ಸಿಬ್ಬಂದಿ.
ಕೋರಮಂಗಲದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹಣ್ಣು–ತರಕಾರಿ ವಿತರಿಸುತ್ತಿರುವ ಹಾಪ್‌ಕಾಮ್ಸ್‌ ಸಿಬ್ಬಂದಿ.   

ಬೆಂಗಳೂರು: ರೈತರು ಬೆಳೆದ ಹಣ್ಣು–ತರಕಾರಿಗಳನ್ನುಮಳಿಗೆಗಳ ಮೂಲಕ ಮಾರುತ್ತಿರುವ ’ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘ‘ವು (ಹಾಪ್‍ಕಾಮ್ಸ್) ಈಗ ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಉಚಿತವಾಗಿ ಸೇವೆ ನೀಡಲು ಆರಂಭಿಸಿದೆ.

ಹಾಪ್‍ಕಾಮ್ಸ್ ಹೊರತಂದಿರುವ ನೂತನ ಆನ್‌ಲೈನ್‌ ಸ್ಟೋರ್‌ ತಾಂತ್ರಿಕತೆಯ ಮೂಲಕಗ್ರಾಹಕರು ಮನೆಯಿಂದಲೇ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದು. ಈ ಸೇವೆಯನ್ನು ಸದ್ಯಕ್ಕೆ ಕೋರಮಂಗಲದ ನ್ಯಾಷನಲ್ ಗೇಮ್ಸ್‌ ವಿಲೇಜ್‌ (ಎನ್‌ಜಿವಿ) ಸಮೀಪದ ಮಳಿಗೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಜನರ ಸ್ಪಂದನೆ ನೋಡಿಕೊಂಡು ಬೆಂಗಳೂರಿನಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಿದೆ.

‘ಹಣ್ಣು–ತರಕಾರಿ ಖರೀದಿಗೆ ಬೇಡಿಕೆ ಇದ್ದರೂ ಕೊರೊನಾದಿಂದಾಗಿ ಗ್ರಾಹಕರು ಮಳಿಗೆಗಳತ್ತ ಬರಲು ಹಿಂಜರಿಯುತ್ತಿದ್ದಾರೆ. ಹಲವು ಗ್ರಾಹಕರು ಮೊದಲಿನಿಂದಲೂ ಹಾಪ್‌ಕಾಮ್ಸ್‌ನಿಂದ ಆನ್‌ಲೈನ್‌ ಸೇವೆ ಬಯಸಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ತಾಂತ್ರಿಕ ಪಾಲುದಾರಿಕೆಯೊಂದಿಗೆ ಉತ್ಪನ್ನಗಳ ಮಾರಾಟಕ್ಕೆ ಆನ್‌ಲೈನ್ ವೇದಿಕೆ ಕಲ್ಪಿಸಲಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ‘ಪ್ರಜಾವಾಣಿ’ಗೆತಿಳಿಸಿದರು.

ADVERTISEMENT

‘ಕೋರಮಂಗಲದ ಮಳಿಗೆಯಲ್ಲಿ ಮಾರಾಟ ಇಳಿಮುಖವಾಗಿತ್ತು. ಆನ್‌ಲೈನ್‌ ಸೇವೆ ಆರಂಭವಾದ ನಂತರ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಎರಡು ವಾರಗಳಲ್ಲಿ ₹17 ಸಾವಿರದವರೆಗೆ ವಹಿವಾಟು ನಡೆದಿದೆ’ ಎಂದು ಮಾಹಿತಿ ನೀಡಿದರು.

‘ಹಾಪ್‌ಕಾಮ್ಸ್‌ ಸಿಬ್ಬಂದಿಗೆ ಇದು ಆ್ಯಪ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರಿಗೆ ಲಿಂಕ್‌ ಮೂಲಕ ಆನ್‌ಲೈನ್ ಸ್ಟೋರ್‌ ಲಭ್ಯವಾಗಲಿದೆ. ಅದಕ್ಕೆ ಪ್ರವೇಶಿಸಿದ ಕೂಡಲೇ ಸಂಸ್ಥೆಯ ಎಲ್ಲ ಉತ್ಪನ್ನಗಳು ದರ ಸಹಿತ ಮಾಹಿತಿ ಸಿಗಲಿದೆ. ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳ ಬೇಡಿಕೆಯನ್ನು ಸಂಜೆಯೊಳಗೆ ಸಲ್ಲಿಸಿದರೆ, ಮರುದಿನ ಬೆಳಿಗ್ಗೆ ಸಿಬ್ಬಂದಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದಾರೆ’ ಎಂದು ವಿವರಿಸಿದರು.

ಪಾಲುದಾರಿಕೆಗೆ ಅವಕಾಶ
‘ಹಾಪ್‌ಕಾಮ್ಸ್‌ನ ಆನ್‌ಲೈನ್ ಸೇವೆಯನ್ನು ನಗರದಾದ್ಯಂತ ಇರುವ ಎಲ್ಲ ಮಳಿಗೆಗಳಿಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಹಾಪ್‌ಕಾಮ್ಸ್‌ ಸಿಬ್ಬಂದಿ ಜೊತೆಗೆ ಉತ್ಪನ್ನಗಳನ್ನು ಪೂರೈಸಲು ಡೆಲಿವರಿ ಪಾಲುದಾರ ಸಂಸ್ಥೆಗಳು ಮುಂದೆ ಬಂದರೆ, ಅವರಿಗೂ ಅವಕಾಶ ನೀಡಲಾಗುವುದು’ಎಂದು ಹಾಪ್‌ಕಾಮ್ಸ್‌ (ಬೆಂಗಳೂರು) ಅಧ್ಯಕ್ಷ ಎನ್‌.ದೇವರಾಜು ತಿಳಿಸಿದರು.

**

ಆನ್‌ಲೈನ್ ಸೇವೆಯಿಂದ ಗ್ರಾಹಕರ ಬೇಡಿಕೆಯಷ್ಟೇ ಉತ್ಪ‍ನ್ನಗಳು ರೈತರಿಂದ ತಾಜಾ ಸ್ಥಿತಿಯಲ್ಲಿ ಮನೆ ಬಾಗಿಲಿಗೆ ಬರಲಿದೆ.
–ಉಮೇಶ್ ಎಸ್.ಮಿರ್ಜಿ, ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.