
ಬೆಂಗಳೂರು: ನವದೆಹಲಿಯ ಇಂಡಿಯನ್ ಅಕಾಡೆಮಿ ಆಫ್ ಹಾರ್ಟಿಕಲ್ಚರಲ್ ಸೈನ್ಸಸ್ (ಐಎಎಚ್‌ಎಸ್), ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಸಹಯೋಗದಲ್ಲಿ ಇದೇ 6ರಿಂದ 9ರವರೆಗೆ ಜಿಕೆವಿಕೆಯ ಡಾ.ಬಾಬುರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಭಾರತೀಯ ತೋಟಗಾರಿಕೆ ವಿಜ್ಞಾನ ಕಾಂಗ್ರೆಸ್ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಆರ್ ಪಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್, ‘ನಾಲ್ಕು ದಿನ ನಡೆಯುವ ಸಮ್ಮೇಳನದಲ್ಲಿ ತೋಟಗಾರಿಕೆಗೆ ಸಂಬಂಧಿಸಿದ 11 ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಇದರಲ್ಲಿ ವಿಜ್ಞಾನಿಗಳು, ಸಂಶೋಧಕರು, ಉದ್ಯಮಿಗಳು, ರೈತರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜ್ಞಾನಿಗಳು, ಉದ್ಯಮಿಗಳು ಹಾಗೂ ರೈತರಿಗೆ ಸನ್ಮಾನ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ತೋಟಗಾರಿಕೆ ಅಭಿವೃದ್ಧಿಗೆ ಹೊಸ ಮಾರ್ಗಸೂಚಿಯನ್ನು ಮರು ವ್ಯಾಖ್ಯಾನಿಸುವುದು. ವಿವಿಧ ಬೆಳೆಗಳಿಗೆ ಆದ್ಯತೆ ನೀಡುವುದು, ನೂತನ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಮತ್ತು ರೈತ ಆಧಾರಿತ ನಾವೀನ್ಯತೆಗಳನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ’ ಎಂದು ತಿಳಿಸಿದರು.
‘ನ.6ರಂದು ಬೆಳಿಗ್ಗೆ 9ಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಿಎಆರ್‌ಇ ಕಾರ್ಯದರ್ಶಿ ಮಂಗಿ ಲಾಲ್ ಜಾಟ್, ಐಸಿಎಆರ್‌ನ ಮಾಜಿ ನಿರ್ದೇಶಕ ಆರ್.ಎಸ್. ಪರೋಡಾ ಭಾಗವಹಿಸಲಿದ್ದಾರೆ’ ಎಂದರು.
ಐಸಿಎಆರ್‌ನ ಎಡಿಜಿ ವಿ.ಬಿ. ಪಟೀಲ್, ಐಐಎಚ್‌ಆರ್‌ನ ನಿರ್ದೇಶಕ ತುಷಾರ್ ಕಾಂತಿ ಬೆಹರಾ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಡೀನ್ ಎನ್.ಬಿ. ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.