ADVERTISEMENT

ಹೊಸಕೆರೆಹಳ್ಳಿ ಮೇಲ್ಸೇತುವೆ; ಅಕ್ಟೋಬರ್‌ಗೆ ಪೂರ್ಣ: ಬಿಬಿಎಂಪಿ ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 15:56 IST
Last Updated 30 ಜುಲೈ 2025, 15:56 IST
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ   

ಬೆಂಗಳೂರು: ಹೊರವರ್ತುಲ ರಸ್ತೆಯ ಪಿಇಎಸ್‌ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಅಕ್ಟೋಬರ್‌ನಲ್ಲಿ ನಾಗರಿಕರ ಸೇವೆಗೆ ಲಭ್ಯವಾಗುವಾಗುವಂತೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜಕಾಲುವೆ ಬಫರ್‌ ಝೋನ್‌ನಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಅವರು ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು.

‘ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ 500 ಮೀ. ಉದ್ದದ್ದಾಗಿದ್ದು, ಶೇ 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಾಯಂಡಹಳ್ಳಿ ಜಂಕ್ಷನ್ ಕಡೆಯ ಡೌನ್‌ರ‍್ಯಾಂಪ್ ಕಾಮಗಾರಿ ಮಾತ್ರ ಬಾಕಿಯಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಬಳಿಯಿರುವ ಸುತ್ತಮುತ್ತಲಿನ ಅಡ್ಡರಸ್ತೆಗಳನ್ನು ಸುಗಮ ಸಂಚಾರಕ್ಕೆ ಅನುವಾಗುವಂತೆ ದುರಸ್ತಿ ಮಾಡಲು ಮಹೇಶ್ವರ್‌ ರಾವ್‌ ಹೇಳಿದರು.

ಹೊಸಕೆರೆಹಳ್ಳಿಯ ಶ್ರೀನಿವಾಸ ರಸ್ತೆಯಲ್ಲಿ ಜಲಮಂಡಳಿಯು ಸಂಪೂರ್ಣ ರಸ್ತೆಯನ್ನು ಅಗೆದು ಕಾಮಗಾರಿ ನಡೆಸಿದ್ದು, ಕಾಮಗಾರಿ ಪೂರ್ಣಗೊಂಡಿದ್ದರೂ ದುರಸ್ತಿ ಕಾರ್ಯ ನಡೆಸಿರುವುದಿಲ್ಲ. ಈ ಸಂಬಂಧ ಜಲಮಂಡಳಿ ಅಧಿಕಾರಿಗಳಿಗೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಬಿಎಂಆರ್‌ಡಿಎ ಆಯುಕ್ತ ರಾಜೇಂದ್ರ ಚೋಳನ್, ವಿಶೇಷ ಆಯುಕ್ತ ಕರೀಗೌಡ, ಆರ್‌.ಆರ್‌. ನಗರ ವಲಯ ಆಯುಕ್ತ ಸತೀಶ್, ಬಿ–ಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್ ಪ್ರಹ್ಲಾದ್, ಮುಖ್ಯ ಎಂಜಿನಿಯರ್‌ ರಾಜೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.