ADVERTISEMENT

ಜಮೀನು ವ್ಯವಹಾರದಲ್ಲಿ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:45 IST
Last Updated 23 ಜನವರಿ 2019, 19:45 IST

ಹೊಸಕೋಟೆ:ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಮುಂದಾಗಿ, ಮುಂಗಡ ಹಣ ಪಡೆದು ವಂಚಿಸಿದ ಬಗ್ಗೆ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಬಿ. ಬಸವರಾಜು ವಂಚನೆಗೆ ಒಳಗಾದವರು.

‘ತಾಲ್ಲೂಕಿನ ಚೀಮಂಡಹಳ್ಳಿ ಗ್ರಾಮದ ಗಿಡ್ಡಪ್ಪ ಅವರ ಪುತ್ರ ಮುನಿಶಾಮಣ್ಣ ತಮ್ಮ ಜಮೀನು ಮಾರಾಟಕ್ಕಿದೆ ಎಂದು ತಿಳಿಸಿದರು. ಎಕರೆಗೆ ₹ 42 ಲಕ್ಷದಂತೆ ಮಾತನಾಡಿ ಅವರಿಗೆ ಮುಂಗಡವಾಗಿ ₹ 25 ಲಕ್ಷ ಕೊಟ್ಟು ಕರಾರು ಪತ್ರ ಮಾಡಿಸಿಕೊಂಡಿದ್ದೆ. ಹಲವು ಸಾರಿ ಕೇಳಿದರೂ ಮುನಿಶಾಮಣ್ಣ ಜಮೀನಿನ ದಾಖಲೆ ಪತ್ರ ಮಾಡಿಸಲಿಲ್ಲ. ಸಬೂಬು ಹೇಳಿ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಸಂಶಯಗೊಂಡು ತಾಲ್ಲೂಕು ಕಚೇರಿಯಲ್ಲಿ ಮಾಹಿತಿ ಪಡೆಯಲು ಹೋದಾಗ ಜಮೀನಿನ ದಾಖಲೆಗಳೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು’ ಎಂದು ಬಸವರಾಜು ಹೇಳಿದರು.

ADVERTISEMENT

‘ನನ್ನ ದೂರಿನ ಅನ್ವಯ ಕಳೆದ 2018 ಸೆ.15 ಉಪವಿಭಾಗಾಧಿಕಾರಿ ದಾಖಲೆ ಪರಿಶೀಲಿಸಿದರು. ಮಾರಾಟಕ್ಕೆ ಇಟ್ಟಿದ್ದ ಜಮೀನು ಸರ್ಕಾರಿ ಜಮೀನಾಗಿದ್ದು ಅದರ ಪಹಣಿ ರದ್ದು ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ್ದಾರೆ. ಮುಂಗಡ ಹಿಂದಿರುಗಿಸುವಂತೆ ಕೇಳಲು ಹೋದಾಗ ಮುನಿಶಾಮಣ್ಣ ಮತ್ತು ಅವರು ಕುಟುಂಬದವರು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ದೂರು ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.