ಬೆಂಗಳೂರು: ತಾಯಂದಿರ ಚಿಕಿತ್ಸೆಗೆ ಸಂಬಂಧಿಸಿದಂತೆ ಜಯನಗರ ಸಾರ್ವಜನಿಕ ಆಸ್ಪತ್ರೆಯನ್ನು ಬುಧವಾರ ಪರಿಶೀಲಿಸಿದ ಬಿಜೆಪಿ ಸತ್ಯಶೋಧನಾ ತಂಡ, ಸ್ಕ್ಯಾನಿಂಗ್ ಯಂತ್ರ ಸೇರಿ ವಿವಿಧ ಯಂತ್ರೋಪಕರಣಗಳನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿತು.
ರಾಜ್ಯದ ವಿವಿಧೆಡೆ ಬಾಣಂತಿಯರ ಸಾವಿನ ಪ್ರಕರಣಗಳು ವರದಿಯಾಗುತ್ತಿರುವುದರಿಂದ ತಂಡವು ಸ್ಥಳೀಯ ಶಾಸಕ ಸಿ.ಕೆ. ರಾಮಮೂರ್ತಿ ನೇತೃತ್ವದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿತು. ವಿಧಾನ ಪರಿಷತ್‌ನ ಮಾಜಿ ಸದಸ್ಯೆ ತಾರಾ ಅನೂರಾಧಾ, ಬಿಜೆಪಿ ಮಹಿಳಾ ಮೋರ್ಚಾದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವಿಜಯಲಕ್ಷ್ಮಿ, ನಾಗರತ್ನಾ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ತಂಡದ ಸದಸ್ಯರು ಆಸ್ಪತ್ರೆಯಲ್ಲಿನ ವಾರ್ಡ್‌ಗಳಿಗೆ ಭೇಟಿ ನೀಡಿ, ಸ್ವಚ್ಛತೆ ಹಾಗೂ ವಿವಿಧ ವೈದ್ಯಕೀಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಯರನ್ನು ವಿಚಾರಿಸಿದರು. ವೈದ್ಯರಿಂದಲೂ ಆಸ್ಪತ್ರೆಯಲ್ಲಿನ ವ್ಯವಸ್ಥೆ ಹಾಗೂ ಚಿಕಿತ್ಸೆಗಳ ಬಗ್ಗೆ ವಿವರ ಪಡೆದರು.
‘ಸದ್ಯ ಆಸ್ಪತ್ರೆಯಲ್ಲಿ 43 ಬಾಣಂತಿಯರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಹಜ ಹೆರಿಗೆಗೆ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ. ಕಳೆದ ವರ್ಷ ಆಸ್ಪತ್ರೆಯಲ್ಲಿ 4,500 ಹೆರಿಗೆಗಳಾಗಿದ್ದು, ಇವುಗಳಲ್ಲಿ ಶೇ 70 ರಷ್ಟು ಪ್ರಕರಣಗಳಲ್ಲಿ ಸಹಜ ಹೆರಿಗೆಗಳಾಗಿವೆ. ಸಂಕೀರ್ಣ ಪ್ರಕರಣಗಳಲ್ಲಿ ಮಾತ್ರ ಸಿಸೇರಿಯನ್ ಮಾಡಲಾಗಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸುರೇಂದ್ರ ತಿಳಿಸಿದರು.
‘ಆಸ್ಪತ್ರೆಯು ಒಟ್ಟು 300 ಹಾಸಿಗೆಗಳನ್ನು ಒಳಗೊಂಡಿದ್ದು, ನೂರು ಹಾಸಿಗೆಗಳನ್ನು ತಾಯಿ–ಮಕ್ಕಳಿಗೆ ಮೀಸಲಿಡಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ 12 ಹಾಸಿಗೆಗಳು ಹಾಗೂ ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕದಲ್ಲಿ (ಎಸ್‍ಎನ್‍ಸಿಯು) 7 ಹಾಸಿಗೆಗಳು ಲಭ್ಯ ಇವೆ. ಒಟ್ಟು ಆರು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಆಸ್ಪತ್ರೆ ಒಳಗೊಂಡಿದೆ. ನಿತ್ಯ 1,000ದಿಂದ 1,200 ಹೊರರೋಗಿಗಳು ಭೇಟಿ ನೀಡುತ್ತಾರೆ. ತಿಂಗಳಿಗೆ 400ರಿಂದ 500 ಹೆರಿಗೆಗಳಾಗುತ್ತವೆ’ ಎಂದು ವಿವರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಾರಾ ಅನೂರಾಧಾ, ‘ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯನ್ನು ಪರಿಶೀಲಿಸಲಾಯಿತು. ಇಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲಾಗಿದ್ದು, ಎಲ್ಲವೂ ವ್ಯವಸ್ಥಿತವಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಣಂತಿಯರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.
ಸಿ.ಕೆ. ರಾಮಮೂರ್ತಿ, ‘ಬಾಣಂತಿಯರ ಸರಣಿ ಸಾವು ಮರುಕಳಿಸಬಾರದು ಎಂಬ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇವೆ. ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಯಂತ್ರೋಪಕರಣ ಒದಗಿಸಬೇಕಿದೆ. ಈ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತರಲಾಗಿತ್ತು. ಈಗ ಮತ್ತೊಮ್ಮೆ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುವುದು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಆಡಿಯೂ ವೈದ್ಯಕೀಯ ಉಪಕರಣ ಅಳವಡಿಕೆಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.