ಪ್ರಜಾವಾಣಿ ವಾರ್ತೆ
ಬೆಂಗಳೂರು: ನಾಗರಬಾವಿ ಎರಡನೇ ಹಂತದ ಖಾಸಗಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಡ್ರೆಸಿಂಗ್ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಮೊಬೈಲ್ ಇಟ್ಟು ಚಿತ್ರೀಕರಿಸುತ್ತಿದ್ದ ಟೆಕ್ನಿಷಿಯನ್‌ನನ್ನು ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಸುವೆಂದು ಮೊಹತಾ (23) ಬಂಧಿತ ಆರೋಪಿ.
ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಿಂದ ಜೂನಿಯರ್ ಟೆಕ್ನಿಷಿಯನ್ ಆಗಿ ಮೊಹತಾ ಕೆಲಸ ಮಾಡುತ್ತಿದ್ದ. ಕೊಟ್ಟಿಗೆಪಾಳ್ಯದ ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದರು.
ಡ್ರೆಸಿಂಗ್ ರೂಂನಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟಿದ್ದ ಆರೋಪಿ, ಸ್ಟಾಫ್ ನರ್ಸ್‍ಗಳು ಬಟ್ಟೆ ಬದಲಾಯಿಸುವುದನ್ನು ವಿಡಿಯೊ ಮಾಡುತ್ತಿದ್ದ. ಡಿ.20ರಂದು ಬಟ್ಟೆ ಬದಲಾವಣೆಗೆ ತೆರಳಿದ್ದ ನರ್ಸ್‌ವೊಬ್ಬರು ಮೊಬೈಲ್ ಗಮನಿಸಿದ್ದರು. ಮೊಬೈಲ್ ಪರಿಶೀಲಿಸಿದಾಗ ರಹಸ್ಯವಾಗಿ ವಿಡಿಯೊ ಚಿತ್ರೀಕರಿಸುತ್ತಿರುವುದು ಗೊತ್ತಾಗಿ ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು ಎಂದು ಮೂಲಗಳು ಹೇಳಿವೆ.
ಬಳಿಕ ಆಸ್ಪತ್ರೆಯ ನಿರ್ದೇಶಕ ಚೇತನ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.