ADVERTISEMENT

ಕೋವಿಡ್: 6 ಸಾವಿರ ಹಾಸಿಗೆ ಲಭ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 9:13 IST
Last Updated 17 ಏಪ್ರಿಲ್ 2021, 9:13 IST

ಬೆಂಗಳೂರು: ‘ನಗರದಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ಒದಗಿಸಲು ಸದ್ಯ ಕೋವಿಡ್ ಆರೈಕೆ ಕೇಂದ್ರಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ಒಟ್ಟು 6 ಸಾವಿರ ಹಾಸಿಗೆಗಳು ಲಭ್ಯವಿದೆ. ಶೀಘ್ರದಲ್ಲಿಯೇ ಇನ್ನಷ್ಟು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದಲ್ಲಿ ಕೋವಿಡ್ ಸಂಬಂಧ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆಕಂಡ ಕಾರಣ ‌ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ(ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು, ಕಿಮ್ಸ್ ಹಾಗೂ ಸೆಂಟ್ ಜಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಚಿಕಿತ್ಸೆಗೆ ಗುರುತಿಸಲಾದ ಹಾಸಿಗೆಗಳಲ್ಲಿ ಸದ್ಯ 3,869 ಹಾಸಿಗೆಗಳು ಭರ್ತಿಯಾಗಿವೆ. ಇನ್ನೂ 2,131 ಹಾಸಿಗೆಗಳು ಲಭ್ಯವಿದೆ. ಕಿಮ್ಸ್ ಹಾಗೂ ಬಿಎಂಸಿಆರ್‌ಐ ಆಸ್ಪತ್ರೆಗಳಿಂದ ಒಟ್ಟು 1,800 ಹಾಸಿಗೆಗಳು ಕೋವಿಡ್ ಚಿಕಿತ್ಸೆಗೆ ದೊರೆಯಲಿವೆ. ಸದ್ಯ ವಿಕ್ಟೋರಿಯಾದಲ್ಲಿ 400 ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಆ ಸಂಖ್ಯೆಯನ್ನು 750ಕ್ಕೆ ಏರಿಕೆ ಮಾಡಲು ಸೂಚಿಸಲಾಗಿದೆ. ಆಸ್ಪತ್ರೆಯ ಹತ್ತಿರದ ಎರಡು ಹೋಟೆಲ್‌ಗಳನ್ನು ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ 200 ಹಾಸಿಗೆಗಳನ್ನು ಸಿದ್ಧಗೊಳಿಸಿ, ಪ್ರಾರಂಭಿಕ ಲಕ್ಷಣಗಳು ಇರುವವರನ್ನು ದಾಖಲಿಸಿಕೊಳ್ಳಲಾಗುತ್ತದೆ. ಇಲ್ಲಿನ ವೈದ್ಯರೇ ಗುರುತಿಸಲಾದ ಹೋಟೆಲ್‌ನಲ್ಲಿ ಚಿಕಿತ್ಸೆ ನೀಡುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಒಟ್ಟು 950 ಹಾಸಿಗೆಯನ್ನು ಬಿಎಂಸಿಆರ್‌ಐ ನಿರ್ವಹಣೆ ಮಾಡುತ್ತದೆ. ಸದ್ಯಬಿಎಂಸಿಆರ್‌ಐ ಅಡಿಯಲ್ಲಿ ಕೋವಿಡ್‌ ಪೀಡಿತರಿಗೆ 70 ಐಸಿಯು ಹಾಸಿಗೆ ಮೀಸಲಿಡಲಾಗಿದೆ. ಅಲ್ಲಿ ಹೆಚ್ಚುವರಿಯಾಗಿ 50ರಿಂದ 100 ಐಸಿಯು ಹಾಸಿಗೆಯನ್ನು 15 ದಿನಗಳಲ್ಲಿ ಸಿದ್ಧಗೊಳಿಸಲಾಗುತ್ತದೆ. ಕಿಮ್ಸ್‌ನಲ್ಲಿ ಕೋವಿಡ್‌ಗೆ 500 ಹಾಸಿಗೆ ನೀಡಲು ಸೂಚಿಸಲಾಗಿದೆ. ಅಲ್ಲಿ ಹಾಸಿಗೆಗಳು ಎರಡರಿಂದ ಮೂರು ದಿನದೊಳಗೆ ಲಭ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.