ADVERTISEMENT

ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ: ವಸತಿ ಸಚಿವ ಜಮೀರ್ ಅಹಮದ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 16:06 IST
Last Updated 8 ಜೂನ್ 2023, 16:06 IST
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್   

ಬೆಂಗಳೂರು: ವಸತಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ ಆರಂಭಿಸಲಾಗುವುದು ಎಂದು ಸಚಿವ ಬಿ.ಜೆಡ್‌. ಜಮೀರ್ ಅಹಮದ್ ಖಾನ್‌ ಹೇಳಿದರು.

‘ಸಾರ್ವಜನಿಕರು ಬೆಂಗಳೂರಿನವರೆಗೆ ಬರುವುದು ತಪ್ಪಿಸಲು ಜನರ ಬಳಿಗೆ ನಾನೇ ಹೋಗಲು ನಿರ್ಧರಿಸಿದ್ದೇನೆ. ಮೊದಲ ಜನತಾ ದರ್ಶನ ಆಗಸ್ಟ್‌ 1ರಂದು ನಡೆಯಲಿದೆ’ ಎಂದು ತಿಳಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನೆ ನಡೆಸಿ ಗುರುವಾರ ಮಾತನಾಡಿದ ಅವರು, ‘ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಎರಡು ದಿನ ಜನತಾ ದರ್ಶನ ನಡೆಸಲಿದ್ದೇನೆ. ಜಿಲ್ಲೆ ವ್ಯಾಪ್ತಿಯ ಎರಡೂ ಇಲಾಖೆಗಳ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಇರಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಆಗಸ್ಟ್ ಒಳಗೆ ಎರಡೂ ಇಲಾಖೆಗಳಲ್ಲಿ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಲು ಅಧಿಕಾರಿಗಳಿಗೆ ಗಡುವು ನೀಡಿದ್ದೇನೆ. ಜನತಾ ದರ್ಶನ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಅಥವಾ ಅಧಿಕಾರಿಗಳ ಮಟ್ಟದಲ್ಲಿ ತಪ್ಪು ನಡೆದಿದ್ದರೆ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು‘ ಎಂದು ಎಚ್ಚರಿಸಿದರು.

ಗೃಹಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಅಲ್ಪ ಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಮತ್ತು ಯೋಜನೆಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ದುರುಪಯೋಗವಾಗದಂತೆ ಅಧಿಕಾರಿಗಳು ಜಾರಿಗೊಳಿಸಬೇಕು. ಬೆಂಗಳೂರಿನ 25 ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ ಘೋಷಿಸಿರುವ 154 ಕೊಳೆಗೇರಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಒಂದು ತಿಂಗಳಲ್ಲಿ ಪ್ರಾರಂಭಿಸಬೇಕು ಎಂದು ಸೂಚಿಸಿದರು.

₹500 ಕೋಟಿ ಅನುದಾನಕ್ಕೆ ಬೇಡಿಕೆ: ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಅನುದಾನ ಕಡಿಮೆ ಇದ್ದು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಚಾಲ್ತಿ ಯೋಜನೆಗಳಿಗೂ ಅನುದಾನ ಕೊರತೆ ಇದೆ. ಸಿಬ್ಬಂದಿಗೆ ವೇತನ, ಭತ್ಯೆಗೂ ಕಷ್ಟ ಆಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.

‘ಬಜೆಟ್ ಗೆ ಮುನ್ನ ಯಾವ ಯೋಜನೆಗಳಿಗೆ ಅನುದಾನದ ಅಗತ್ಯವಿದೆ ಎಂಬ ಬಗ್ಗೆ ಪ್ರಸ್ತಾವ ಸಲ್ಲಿಸಿ. ₹500 ಕೋಟಿ ಅನುದಾನಕ್ಕೆ  ಬೇಡಿಕೆ ಇಡೋಣ’ ಎಂದು ಸಚಿವರು ತಿಳಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್ ಇದ್ದರು.

Cut-off box - ಅಮಾನತಿಗೆ ಸೂಚನೆ ಪ್ರಗತಿ ಪರಿಶೀಲನೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಸಚಿವ ಜಮೀರ್ ‘ಮೇಲಧಿಕಾರಿಗಳ ಅನುಮತಿ ಪಡೆಯದೇ ಸಕಾಲಿಕ ಕಾರಣ ಕೊಡದೇ ಗೈರು ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು. ಆಯುಕ್ತರ ಅನುಮತಿ ಪಡೆಯದೆ ಸಭೆಗೆ ಗೈರು ಆಗಿದ್ದ ಮಂಡ್ಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದರ್ಶನ್ ಜೈನ್ ಅವರನ್ನು ಅಮಾನತು ಮಾಡುವಂತೆ ಸ್ಥಳದಲ್ಲೇ ಅದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.