ADVERTISEMENT

ಇದೇ 22–23ಕ್ಕೆ ಹೊಯ್ಸಳ ಸಾಹಿತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 16:24 IST
Last Updated 12 ಅಕ್ಟೋಬರ್ 2022, 16:24 IST

ಬೆಂಗಳೂರು: ‘ಹೊಸ ಮತ್ತು ಹಳೆಯ ತಲೆಮಾರಿನ ಬರಹಗಾರರು ಹೊಯ್ಸಳ ಸಾಹಿತ್ಯೋತ್ಸವದಲ್ಲಿ ಒಂದಡೆ ಸೇರಲಿದ್ದು, ಸಾಹಿತ್ಯದ ಗಂಭೀರ ಚರ್ಚೆಗಳು ನಡೆಯಲಿವೆ’ ಎಂದು ಕಾರ್ಯಕ್ರಮದ ಸಂಚಾಲಕರಾದ ಕವಿ ಬಿ.ಆರ್. ಲಕ್ಷ್ಮಣರಾವ್ ಮಾಹಿತಿ ನೀಡಿದರು.

‘ಎರಡು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ‘ಕವಿ ಸಮಯ, ವಿಮರ್ಶೆಯ ಕಷ್ಟ ಸುಖ, ಕಾದಂಬರಿ ವಸ್ತು–ನಿರ್ವಹಣೆ ಮತ್ತು ಯಶಸ್ಸು, ಜ್ಞಾಪಕ ಚಿತ್ರಶಾಲೆ, ಎಸ್.ಎಲ್. ಭೈರಪ್ಪ ಅವರೊಂದಿಗೆ ಸಂವಾದ, ಕವಿ ಸಮಯ, ಸಾಹಿತ್ಯದ ಪೂರ್ವಾಪರ, ಕತೆಗಾರನ ಹಾಡು–ಪಾಡು, ಆತ್ಮಕಥೆಯ ಆತ್ಮಕಥೆ ಎಂಬ 8 ಸಾಹಿತ್ಯ ಗೋಷ್ಠಿಗಳು ನಡೆಯಲಿವೆ. 70ಕ್ಕೂ ಹೆಚ್ಚು ಹಿರಿಯ ಸಾಹಿತಿಗಳು ಲೇಖಕರು, ವಿಮರ್ಶಕರು, ಯುವ ಬರಹಗಾರರು ಭಾಗಹವಹಿಸಲಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಹಿತಿ ಎಸ್. ಎಲ್ ಭೈರಪ್ಪ ಅವರು ಸಾಹಿತ್ಯೋತ್ಸವ ಉದ್ಘಾಟಿಸಲಿದ್ದಾರೆ. ಕೇಂದ್ರ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾದಂಬರಿ, ವಿಮರ್ಶೆ, ಕವಿಗೋಷ್ಠಿ, ನೆನಪಿನ ಚಿತ್ರಶಾಲೆ, ಸಾಹಿತ್ಯದ ಪೂರ್ವಾಪರ ಮುಂತಾದವುಗಳ ಬಗ್ಗೆ ಯಾವುದೇ ಸಿದ್ಧಾಂತಕ್ಕೆ ಒಳಪಡದೆ ಮುಕ್ತ ಚರ್ಚೆ ನಡೆಯಲಿದೆ. ಇದು ಯಾವುದೇ ಒಂದು ಬಣಕ್ಕೆ ಸೇರಿದ ಕಾರ್ಯಕ್ರಮವಲ್ಲ. ಇದು ಕೇವಲ ಸಾಹಿತ್ಯಕ್ಕೆ ಸೇರಿದ ಕಾರ್ಯಕ್ರಮವಾಗಿದೆ. ಇದರಿಂದ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ದೆಸೆ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಇದೇ 22 ಮತ್ತು 23ರಂದು ಹೊಯ್ಸಳ ಸಾಹಿತ್ಯೋತ್ಸವವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೊರ ಜಿಲ್ಲೆಯ 200, ಹಾಸನ ಜಿಲ್ಲೆಯ 600 ಸಾಹಿತ್ಯ ಆಸಕ್ತರು ನೋಂದಾಯಿಸಿಕೊಳ್ಳಬಹುದು. ನೋಂದಣಿ ಮಾಡಿಕೊಳ್ಳಲು ₹250 ಶುಲ್ಕ ನಿಗದಿ ಪಡಿಸಲಾಗಿದೆ. ಕಾರ್ಯಕ್ರಮ ನೋಂದಣಿ ಹಾಗೂ ಮಾಹಿತಿಗಾಗಿ 9108847480, 9964548264, 9480582829ಗೆ ಸಂಪರ್ಕಿಸಬಹುದು’ ಎಂದು ಸಮಿತಿಯ ಕಾರ್ಯದರ್ಶಿ ಎಚ್.ಎಲ್. ಮಲ್ಲೇಶಗೌಡ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.