ADVERTISEMENT

ಬಂಕ್‌ಗಳಿಗೆ ಇಂಧನ ಕೊರತೆ: ವಿತರಕರ ಪರದಾಟ

ವಿಜಯಕುಮಾರ್ ಎಸ್.ಕೆ.
Published 28 ಮಾರ್ಚ್ 2022, 20:30 IST
Last Updated 28 ಮಾರ್ಚ್ 2022, 20:30 IST
   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಸದ್ದಿಲ್ಲದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಧ್ಯೆ ಪೆಟ್ರೋಲ್ ಬಂಕ್‌ಗಳಿಗೆ ಬೇಡಿಕೆಯಷ್ಟು ಇಂಧನ ಪೂರೈಕೆ ಮಾಡಲು ಕಂಪನಿಗಳು ಹಿಂದೇಟು ಹಾಕುತ್ತಿವೆ. ಇದರಿಂದ ಕೆಲ ಬಂಕ್‌ಗಳಲ್ಲಿ ಇಂಧನವಿಲ್ಲದೆ ಗ್ರಾಹಕರು ವಾಪಸ್‌ ತೆರಳುವಂತಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತವಾದರೂ ಭಾರತದಲ್ಲಿ ನಾಲ್ಕು ತಿಂಗಳಿಂದ ದರ ಏರಿಳಿತ ಆಗಲಿಲ್ಲ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದರಿಂದ ತೈಲ ದರ ಏರಿಕೆ ಆಗಿರಲಿಲ್ಲ. ಈಗ ಒಂದು ವಾರದಿಂದ ದಿನವೂ ದರ ಏರಿಕೆ ಆಗುತ್ತಿದೆ. ಮಾರ್ಚ್‌ 21ರಂದು ಲೀಟರ್ ಪೆಟ್ರೋಲ್‌ಗೆ ₹100.58 ಇದ್ದ ಪೆಟ್ರೋಲ್ ದರ ಸೋಮವಾರದ ವೇಳೆಗೆ ₹104.46ಕ್ಕೆ ಏರಿಕೆಯಾಗಿದೆ. ದಿನವೂ 84 ಪೈಸೆಯಿಂದ 85 ಪೈಸೆ ತನಕ ಹೆಚ್ಚಳ ಆಗುತ್ತಿದೆ. ಕಳೆದ ವಾರ ಲೀಟರ್‌ಗೆ ₹85.01 ಇದ್ದ ಡೀಸೆಲ್ ದರ, ಸೋಮವಾರ ₹88.67 ಆಗಿದೆ.

‘ಈ ಸಂದರ್ಭದಲ್ಲಿ ಕೆಲ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಪೆಟ್ರೊಲ್ ಮತ್ತು ಡೀಸೆಲ್ ಪೂರೈಕೆ ಮಾಡದೆ ನಿರ್ಬಂಧಿಸಿವೆ. ಗ್ರಾಹಕರ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ‘ನೋ ಸ್ಟಾಕ್’ ಬೋರ್ಡ್‌ ಹಾಕಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತಿದೆ. ಕಳೆದ 15 ದಿನಗಳಲ್ಲಿ ಆಗಾಗ ಈ ಸ್ಥಿತಿ ಎದರುತ್ತಿದ್ದೇವೆ. ಗ್ರಾಹಕರನ್ನು ವಾಪಸ್ ಕಳುಹಿಸಿ ಬಂಕ್‌ಗಳನ್ನು ನಿರ್ವಹಣೆ ಮಾಡುವುದು ಕಷ್ಟ’ ಎನ್ನುತ್ತಾರೆ ಪೆಟ್ರೋಲ್ ಬಂಕ್ ಮಾಲೀಕರು.

ADVERTISEMENT

‘ಸಾಲದ ರೂಪದಲ್ಲಿ ಇಂಧನ ತಂದು ವ್ಯಾಪಾರವಾದ ಬಳಿಕ ಮರು ದಿನ ಹಣ ಪಾವತಿ ಮಾಡುವ ವ್ಯವಸ್ಥೆ ಇತ್ತು. ಈಗ ಮೊದಲೇ ಹಣ ಪಾವತಿಸಿ ಖರೀದಿ ಮಾಡಬೇಕಾದ ಸ್ಥಿತಿ ಇದೆ. ಬ್ಯಾಂಕ್‌ ವಹಿವಾಟು ನಿಧಾನವಾದರೆ ವಿತರಕರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.

‘ನ.4 ರಂದು ಪೆಟ್ರೋಲ್‌ ದರವನ್ನು ಲೀಟರ್‌ ₹5 ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ₹10 ಕಡಿಮೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚಿನ ದರ ನೀಡಿ ಖರೀದಿಸಿ ತಂದಿದ್ದ ಬಂಕ್ ಮಾಲೀಕರು, ಮರು ದಿನ ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾಯಿತು. ಪ್ರತಿ ಬಂಕ್‌ ಮಾಲೀಕರು ₹5 ಲಕ್ಷದಿಂದ ₹25 ಲಕ್ಷ ತನಕ ನಷ್ಟ ಅನುಭವಿಸಿದರು. ಆ ಸಂದರ್ಭದಲ್ಲಿ ಹಲವು ಬಂಕ್ ಮಾಲೀಕರಿಗೆ ಬಂಡವಾಳವೇ ಇಲ್ಲದಂತೆ ಆಯಿತು. ಈ ನಷ್ಟಕ್ಕೆ ಪರಿಹಾರ ಕೊಡುವವರು ಯಾರು’ ಎಂಬುದು ಪೆಟ್ರೋಲ್ ಬಂಕ್ ಮಾಲೀಕ ಬಾಲರಾಜ್ ಅವರ ಪ್ರಶ್ನೆ.

‘ಈ ಸಂದರ್ಭದಲ್ಲಿ ಕೇಳಿದಷ್ಟು ಇಂಧನವನ್ನು ಕಂಪನಿಗಳು ಪೂರೈಸುತ್ತಿಲ್ಲ. ನಷ್ಟವನ್ನು ಸರಿದೂಗಿಸಿಕೊಳ್ಳುವುದು ಬೇರೆಯ ಮಾತು, ಗ್ರಾಹಕರಿಗೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. 10 ಲೀಟರ್ ಪೆಟ್ರೋಲ್ ಕೇಳುವ ಗ್ರಾಹಕನಿಗೆ 5 ಲೀಟರ್ ಮಾತ್ರ ನೀಡಿ ವಾಪಸ್ ಕಳುಹಿಸಲು ಸಾಧ್ಯವೇ?’ ಎಂದರು.

‘ಅವಧಿ ವಿಸ್ತರಣೆ ಮಾಡಬೇಕು’

‘ಸಗಟು ದರ ಹೆಚ್ಚಳ ಆಗಿದ್ದರಿಂದ ಸಾರಿಗೆ ಸಂಸ್ಥೆಗಳ ಮೇಲೆ ಹೊರೆ ಹೆಚ್ಚಾಗಿದೆ. ಚಿಲ್ಲರೆ ವ್ಯಾಪಾರ ಮಾಡುವ ಬಂಕ್ ಮಾಲೀಕರಿಂದ ಈ ಸಂಸ್ಥೆಗಳು ಖರೀದಿ ಮಾಡಬಹುದು ಎಂಬ ಅನುಮಾನ ಎಚ್‌ಪಿಸಿಎಲ್ ಕಂಪನಿಗೆ ಇದೆ’ ಎನ್ನುತ್ತಾರೆ ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಪ್ರೊಡಕ್ಟ್ಸ್‌ನ ಉಪಾಧ್ಯಕ್ಷ ಎ.ತಾರಾನಾಥ್.

‘ಸಾರಿಗೆ ಸಂಸ್ಥೆಗಳಿಂದ ಎಚ್‌ಪಿಸಿಎಲ್‌ಗೆ ಕೋಟಿಗಟ್ಟಲೆ ಬಾಕಿ ಬರಬೇಕಿದೆ. ಆ ಕಾರಣಕ್ಕೆ ಬಂಕ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆ ಮಾಡುತ್ತಿಲ್ಲ. ಆದರೆ, ಡೀಸೆಲ್ ನಿರ್ವಹಣೆಗೆ ಅವರದೇ ಆದ ವ್ಯವಸ್ಥೆ ಇದೆ. ಆದ್ದರಿಂದ ಸಾರಿಗೆ ಸಂಸ್ಥೆಗಳು ನಮ್ಮಿಂದ ಡೀಸೆಲ್‌ ಪಡೆದುಕೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

‘ಮಧ್ಯಾಹ್ನ 3 ಗಂಟೆಗೆ ಎಚ್‌ಪಿಸಿಎಲ್ ವಹಿವಾಟು ಸ್ಥಗಿತಗೊಳಿಸುತ್ತಿದೆ. ಅದನ್ನು ಕನಿಷ್ಠ 6 ಗಂಟೆ ತನಕ ವಿಸ್ತರಿಸಿದರೆ ಅನುಕೂಲ ಆಗಲಿದೆ’ ಎಂದರು.

‘ಪೂರೈಕೆ ಕಡಿಮೆ ಮಾಡಿಲ್ಲ’

‘ಯಾವುದೇ ಬಂಕ್‌ಗಳಿಗೂ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ಕಡಿಮೆ ಮಾಡಿಲ್ಲ’ ಎಂದು ಎಚ್‌ಪಿಸಿಎಲ್ ಉಪ ಪ್ರಧಾನ ವ್ಯವಸ್ಥಾಪಕ(ಡಿಜಿಎಂ) ಎಂ.ಆರ್.ಕುಮಾರ್ ಸ್ಪಷ್ಟಪಡಿಸಿದರು.

‘ಯಾವ ಬಂಕ್‌ನಲ್ಲೂ ಡೀಸೆಲ್‌ ಖಾಲಿಯಾಗಿ ಗ್ರಾಹಕರನ್ನು ವಾಪಸ್ ಕಳುಹಿಸಿದ ಉದಾಹರಣೆ ಇಲ್ಲ. ಎಚ್‌ಪಿಸಿಎಲ್ ಇರುವುದೇ ಬಂಕ್‌ಗಳಿಗೆ ಇಂಧನ ಪೂರೈಕೆ ಮಾಡಲು. ಅವರಿಗೆ ಕೊರತೆ ಮಾಡುವುದರಿಂದ ಎಚ್‌ಪಿಸಿಎಲ್‌ಗೆ ಏನೂ ಲಾಭ ಇಲ್ಲ’ ಎಂದರು.

‘ಪ್ರತಿದಿನವೂ ವಿತರಕರಿಗೆ ಸಾಲದಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆ ನೀಡಲಾಗುತ್ತಿದೆ. ಪ್ರತಿಯೊಬ್ಬ ವಿತರಕರಿಂದ ಕನಿಷ್ಠ ₹30 ಲಕ್ಷದ ತನಕ ಸಾಲ ಇದ್ದೇ ಇರುತ್ತದೆ. ಮಾರಾಟ ಅವಧಿಯನ್ನೂ ಬೇಡಿಕೆಗೆ ತಕ್ಕಂತೆ ವಿಸ್ತರಣೆ ಮಾಡಲಾಗುತ್ತಿದೆ. ಯಾವುದೇ ಗೊಂದಲ ಇಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.