ADVERTISEMENT

ಭೌತಿಕ ನೆಲೆಗಟ್ಟಿನಲ್ಲಿ ವಚನಗಳ ಅರ್ಥೈಸುವಿಕೆ ಸಲ್ಲದು: ಶಿವಪ್ರಕಾಶ್‌

ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಎಚ್.ಎಸ್. ಶಿವಪ್ರಕಾಶ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 19:34 IST
Last Updated 20 ಜುಲೈ 2022, 19:34 IST
ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಎಚ್.ಎಸ್. ಶಿವಪ್ರಕಾಶ್‌.
ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಎಚ್.ಎಸ್. ಶಿವಪ್ರಕಾಶ್‌.   

ಬೆಂಗಳೂರು: ಶರಣರ ವಚನಗಳಲ್ಲಿನ ಪ್ರತಿ ಅಕ್ಷರದ ಭೌತಿಕ ಅರ್ಥ ಶೋಧಿಸದೆ, ಬೌದ್ಧಿಕ ಭಾವಸೆಲೆಯ ಆಧಾರದ ಮೇಲೆ ಅರ್ಥೈಸಿಕೊಳ್ಳುವ ಪರಿಪಾಟ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಹೇಳಿದರು.

ದೊಮ್ಮಲೂರಿನ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (ಬಿಐಸಿ) ಭಾರತೀಯ ಭಕ್ತಿ ಮತ್ತು ಸಿದ್ಧ ಸಂಪ್ರದಾಯಗಳ ಸಂದರ್ಭದಲ್ಲಿ ವಚನಗಳ ಪಾತ್ರ ಕುರಿತು ಬುಧವಾರ ಹಮ್ಮಿಕೊಂಡಿದ್ದ ಸರಣಿ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕ ಮಹಾದೇವಿ ಪ್ರಸ್ತಾಪ ಮಾಡಿರುವ ಕದಳಿ ವನ, ಶರಣರು ಮೇಳೈಸುತ್ತಿದ್ದ ಕಲ್ಯಾಣ, ವೈಷ್ಣವ ಮಾರ್ಗದ ಶ್ರೀಕೃಷ್ಣನ ಬೃಂದಾವನಗಳಿಗೆ ಭೌತಿಕ ಲೇಪನ ಹಚ್ಚುವುದು, ಅವು ಇಂತಹ ಸ್ಥಳಗಳು ಎಂದು ನಂಬಿಕೊಳ್ಳುವುದು ಭಕ್ತಿ ಮಾರ್ಗದ ತಿಳಿವಳಿಕೆಯ ಅರಿವಿಗೆ ತೊಡಕಾಗುತ್ತದೆ. ಅಕ್ಕನ ಕದಳಿ ತೋಟ ಶ್ರೀಗಿರಿಯ ತುತ್ತತುದಿ. ಅದು ತಾನು ನಂಬಿದ ಚನ್ನಮಲ್ಲಿಕಾರ್ಜುನ ದೇವನ ಭಕ್ತಿಯ ಪರಾಕಾಷ್ಠೆಯ ಸಂಕೇತ. ಅಧ್ಯಾತ್ಮವನ್ನು ಭೌತಿಕ ನೆಲೆಗಟ್ಟಿನಲ್ಲಿ ಅರ್ಥೈಸಲು ಸಾಧ್ಯವೇ ಇಲ್ಲ. ಅಕ್ಕನ ಕದಳಿ ಆಂಧ್ರ ಪ್ರದೇಶದಲ್ಲಿದೆ, ಬಿಜ್ಜಳ ಕಲ್ಯಾಣಕ್ಕೆ ಭೇಟಿ ಕೊಟ್ಟಿದ್ದ ಎನ್ನುವ ಅಂಶಗಳಿಗೆ ಐತಿಹಾಸಿಕ ಪುರಾವೆಗಳಿಲ್ಲ ಎಂದರು.

ADVERTISEMENT

ವಚನಗಳೂ ಸೇರಿ ಎಲ್ಲ ಭಕ್ತಿ ಪಂಥಗಳೂ ಮುಕ್ತಿಯ ಕುರಿತು ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದ್ದರೂ, ಮುಕ್ತಿಯು ಭಕ್ತಿಯ ಜತೆಗೇ ಬೆಸೆದುಕೊಂಡಿದೆ. ಜೈನರಲ್ಲಿನ ಸಲ್ಲೇಖನ ವ್ರತ, ಶರಣರ ಲಿಂಗೈಕ್ಯತ್ವ, ಬೌದ್ಧರ ಪರಿನಿರ್ವಾಣ, ಉಸಿರಿನ ಮೂಲಕವೂ ಕ್ರಿಮಿಗಳು ಮರಣ ಹೊಂದುತ್ತವೆ ಎನ್ನುವುದಕ್ಕಾಗಿ ಕಠಿಣ ನಿಯಮಗಳ ಪಾಲನೆ. ಅಂದು ಮುಕ್ತಿಗಿದ್ದ ಪ್ರಾಮುಖ್ಯ ತೆರೆದಿಡುತ್ತವೆ ಎಂದು ವಿವರಿಸಿದರು.

‘ನುಡಿದರೆ ಮುತ್ತಿನ ಹಾರದಂತಿ ರಬೇಕು. ನುಡಿದರೆ ಸ್ಫಟಿಕದ ಸಲಾಕೆ ಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು. ಇಲ್ಲದಿ ದ್ದರೆ ದೇವ ಮೆಚ್ಚನು’ ಎನ್ನುವ ಮೂಲಕ ವಚನಗಳಲ್ಲಿ ನುಡಿದಂತೆ ನಡೆಯುವುದಕ್ಕೆ ಶರಣರು ಹೆಚ್ಚು ಮಹತ್ವ ನೀಡಿದ್ದಾರೆ. ‘ಕಲ್ಲನಾಗರ ಕಂಡರೆ ಹಾಲೆರೆಯುವರು, ದಿಟದ ನಾಗರ ಕಂಡರೆ ಕೊಲ್ಲೆನ್ನುವರು’ ಎನ್ನುವ ಮೂಲಕ ಸಮಾಜದ ಮೌಢ್ಯ ತಿದ್ದುವ ಪ್ರಯತ್ನಗಳನ್ನು ನಡೆಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.