ADVERTISEMENT

ವೃದ್ಧೆ ಹತ್ಯೆ: ನೇಪಾಳ ತಂಡದ ಕೃತ್ಯ

ಎಚ್‌ಎಸ್‌ಆರ್ ಲೇಔಟ್ ಪೊಲೀಸರ ಕಾರ್ಯಾಚರಣೆ * ಭದ್ರತಾ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:18 IST
Last Updated 19 ಆಗಸ್ಟ್ 2022, 22:18 IST
ಜಯಶ್ರೀ
ಜಯಶ್ರೀ   

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ವೃದ್ಧೆ ಜಯಶ್ರೀ (80) ಅವರ ಹತ್ಯೆ ಪ್ರಕರಣ ಭೇದಿಸಿರುವ ಪೊಲೀಸರು, ನೇಪಾಳದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ನೇಪಾಳದ ಖಡಕ್‌ ಸಿಂಗ್, ಮುಖೇಶ್ ಖಡ್ಕಾ, ಕಮಲ್ ದಾಮಿ, ಕೇಶವ್ ಬೂದಾ, ಶಿವು ಕಟಾಯತ್ ಹಾಗೂ ಗಜೇಂದ್ರ ಬಂಧಿತರು. ಇವರಿಂದ ₹ 20 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಹುಮಹಡಿ ಕಟ್ಟಡ ಹೊಂದಿದ್ದ ವೃದ್ಧೆಯ ಮನೆಗೆ ಆಗಸ್ಟ್ 12ರಂದು ರಾತ್ರಿ ನುಗ್ಗಿದ್ದ ಆರೋಪಿಗಳು, ಜಯಶ್ರೀ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಕೊಂಡು ಪರಾರಿಯಾಗಿದ್ದರು’ ಎಂದು ತಿಳಿಸಿದರು.

ADVERTISEMENT

ಭದ್ರತಾ ಕೆಲಸ ಮಾಡುತ್ತಲೇ ಸಂಚು: ‘ನೇಪಾಳದಿಂದ ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಖಡಕ್‌ ಸಿಂಗ್, ಎಚ್‌ಎಸ್‌ಆರ್‌ ಲೇಔಟ್‌ನ 13ನೇ ಅಡ್ಡರಸ್ತೆಯಲ್ಲಿ ಕಟ್ಟಡದಲ್ಲಿ ಭದ್ರತಾ ಕೆಲಸಕ್ಕೆ ಸೇರಿದ್ದರು. ವೃದ್ಧೆ ಜಯಶ್ರೀ ಅವರನ್ನು ಗಮನಿಸಿದ್ದ ಆರೋಪಿ, ಅವರನ್ನು ಪರಿಚಯ ಮಾಡಿಕೊಂಡು ಆಗಾಗ ಮಾತನಾಡಿಸುತ್ತಿದ್ದ. ವೃದ್ಧೆ ಬಳಿ ಚಿನ್ನಾಭರಣ ಹಾಗೂ ಹಣ ಇರುವುದನ್ನು ತಿಳಿದು ಕೊಂಡಿದ್ದ. ಅದನ್ನೆಲ್ಲ ದೋಚಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

ನೇಪಾಳ ಗಡಿಯಲ್ಲಿ ಬಂಧನ: ‘ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಮೂವರು ಆರೋಪಿ ಗಳು ನಗರದಲ್ಲೇ ಸಿಕ್ಕಿ ಬಿದ್ದರು. ಉಳಿದ ಮೂವರನ್ನು ನೇಪಾಳ ಗಡಿಯಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಹಣ ಮತ್ತು ಚಿನ್ನಾಭರಣಕ್ಕಾಗಿ ಕೃತ್ಯ ಎಸಗಿ ರುವುದಾಗಿ ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

*

ಅಪರಿಚಿತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವ ಮುನ್ನ ವೃದ್ಧರು ಹೆಚ್ಚು ಜಾಗೃತಿ ವಹಿಸಬೇಕು. ಯಾವುದಾದರೂ ಅನುಮಾನವಿದ್ದರೆ ಠಾಣೆಗೆ ಮಾಹಿತಿ ನೀಡಬೇಕು.
–ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.