ADVERTISEMENT

‘ಮಾನವ ಸಾಗಣೆ’ ಕಿಂಗ್‌ಪಿನ್ ಬಳಿ 108 ಪಾಸ್‌ಪೋರ್ಟ್!

ಪಂಜಾಬ್, ದೆಹಲಿ, ಬೆಂಗಳೂರಿನ ಸಿಐಡಿ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 18:48 IST
Last Updated 7 ಡಿಸೆಂಬರ್ 2018, 18:48 IST
ಸುರೇಂದ್ರಪಾಲ್
ಸುರೇಂದ್ರಪಾಲ್   

ಬೆಂಗಳೂರು: ದೆಹಲಿ, ಪಂಜಾಬ್ ಹಾಗೂ ಬೆಂಗಳೂರಿನ ಸಿಐಡಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭೇದಿಸಿರುವ ‘ಮಾನವ ಸಾಗಣೆ’ ಜಾಲಕ್ಕೆ ಮುಂಬೈನ ಅಬ್ದುಲ್ ಕರೀಂ ರೆಹಮಾನ್ ಖುರೇಷಿ ಎಂಬಾತನೇ ಕಿಂಗ್‌ಪಿನ್ ಎಂಬುದು ತನಿಖೆಯಿಂದ ಖಚಿತವಾಗಿದೆ.

ಖುರೇಷಿ ಹಾಗೂ ಆತನ ಒಂಬತ್ತು ಮಂದಿ ಸಹಚರರು ಇದೇ ನ.16ರಂದು ಪೊಲೀಸರಿಗೆ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮುಂಬೈನಲ್ಲಿರುವ ಆತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 108 ಪಾಸ್‌ಪೋರ್ಟ್‌ಗಳು ಸಿಕ್ಕಿವೆ. ಜತೆಗೆ 18.5 ಲಕ್ಷ ನಗದು, ಅರ್ಧ ಕೆ.ಜಿ. ಚಿನ್ನ, ಮತದಾರರ ಗುರುತಿನ ಚೀಟಿಗಳು, ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಸಂತ್ರಸ್ತರ ಸಾಗಣೆಗೆ ಬಳಸುತ್ತಿದ್ದ ಐದು ಕಾರುಗಳನ್ನೂ ಜಪ್ತಿ ಮಾಡಿದ್ದಾರೆ.

ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2017ರ ಡಿಸೆಂಬರ್‌ನಲ್ಲಿ ಈ ಗ್ಯಾಂಗ್ ಪಂಜಾಬ್‌ನ ಸುರೇಂದ್ರಪಾಲ್ ಸಿಂಗ್, ಗುರುಪ್ರೀತ್ ಸಿಂಗ್ ಹಾಗೂ ಮನಪ್ರೀತ್ ಸಿಂಗ್ ಎಂಬುವರನ್ನು ಬೆಂಗಳೂರಿಗೆ ಕರೆತಂದಿತ್ತು. ಇಲ್ಲಿ ಕೆಐಎಎಲ್ ಸಮೀಪದ ಹೋಟೆಲ್‌ವೊಂದರಲ್ಲಿ ಮೂವರನ್ನೂ ಕೂಡಿಹಾಕಿ ಚಿತ್ರಹಿಂಸೆ ನೀಡಿತ್ತು.

ADVERTISEMENT

ಆರೋಪಿಗಳ ಸೂಚನೆಯಂತೆ ತಮ್ಮ ಪೋಷಕರಿಗೆ ಕರೆ ಮಾಡಿದ್ದ ಗುರುಪ್ರೀತ್ ಸಿಂಗ್ ಹಾಗೂ ಮನಪ್ರೀತ್ ಸಿಂಗ್, ‘ನಾವು ಸುರಕ್ಷಿತವಾಗಿ ಕೆನಡಾ ತಲುಪಿದ್ದೇವೆ. ಟ್ರಾವೆಲ್ ಏಜೆಂಟರಿಗೆ ₹ 44 ಲಕ್ಷ ಕೊಡಬೇಕು. ಈ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ’ ಎಂದು ಖಾತೆ ಸಂಖ್ಯೆಯನ್ನು ಹೇಳಿದ್ದರು. ಅವರು ಹಣ ಹಾಕುತ್ತಿದ್ದಂತೆಯೇ ಇಬ್ಬರನ್ನೂ ಬಂಧಮುಕ್ತಗೊಳಿಸಿದ್ದ ಆರೋಪಿಗಳು, ವಿಷಯ ಬಹಿರಂಗಪಡಿಸಿದರೆ ಜೀವ ತೆಗೆಯುವುದಾಗಿ ಬೆದರಿಸಿ ಕಳುಹಿಸಿದ್ದರು.

ಆರೋಪಿಗಳ ಸಂಚು ಅರಿತ ಸುರೇಂದ್ರಪಾಲ್, ಪೋಷಕರಿಗೆ ಕರೆ ಮಾಡಲು ಒಪ್ಪಿರಲಿಲ್ಲ. ಇದರಿಂದ ಕುಪಿತಗೊಂಡ ಖುರೇಷಿ ಗ್ಯಾಂಗ್, ಅವರನ್ನು ಹೊಡೆದು ಸಾಯಿಸಿ ರಾಮನಗರದಲ್ಲಿ ಶವ ಬಿಸಾಡಿ ಪರಾರಿಯಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ ರಾಮನಗರ ಪೊಲೀಸರು, ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವ ಬಗ್ಗೆ ವೆಬ್‌ಸೈಟ್‌ನಲ್ಲಿ ಚಿತ್ರಸಮೇತ ವಿವರ ಪ್ರಕಟಿಸಿದ್ದರು.

ಬಂಧಮುಕ್ತರಾಗಿ ರಾಜ್ಯಕ್ಕೆ ತೆರಳಿದ್ದ ಗುರುಪ್ರೀತ್ ಹಾಗೂ ಮನಪ್ರೀತ್, ‘ಟ್ರಾವೆಲ್ ಏಜೆಂಟರು ನಮಗೆ ಮೋಸ ಮಾಡಿದರು. ಸುರೇಂದ್ರಪಾಲ್ ಅವರ ವಶದಲ್ಲೇ ಇದ್ದಾನೆ’ ಎಂದು ಹೇಳಿದ್ದರು. ಕೂಡಲೇ ಅವರ ಸಂಬಂಧಿ ಗೋವಿಂದ್ ಸಿಂಗ್ ಪಂಜಾಬ್ ಪೊಲೀಸರಿಗೆ ದೂರು ಕೊಟ್ಟಿದ್ದರು.

ಆ ನಂತರ ಪಂಜಾಬ್ ಪೊಲೀಸರು ಸುರೇಂದ್ರಪಾಲ್ ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಇಲ್ಲಿ ತನಿಖೆ ನಡೆಸಿದಾಗ ಸುರೇಂದ್ರಪಾಲ್ ಕೊಲೆಯಾಗಿರುವ ವಿಚಾರ ಗೊತ್ತಾಗಿತ್ತು. ರಾಮನಗರದಲ್ಲಿ ಸ್ಥಳ ಪರಿಶೀಲನೆ ಮಾಡಿ ರಾಜ್ಯಕ್ಕೆ ಮರಳಿದ್ದ ಪೊಲೀಸರು, ಗುರುಪ್ರೀತ್ ಹಾಗೂ ಮನಪ್ರೀತ್ ಅವರ ಪೋಷಕರು ಹಣ ವರ್ಗಾವಣೆ ಮಾಡಿದ್ದ ಬ್ಯಾಂಕ್ ಖಾತೆಯ ವಿವರ ಆಧರಿಸಿ ಹರ್ಮಿಂದರ್ ಸಿಂಗ್‌ನನ್ನು ವಶಕ್ಕೆ ಪಡೆದಿದ್ದರು. ಹೆಚ್ಚಿನ ವಿಚಾರಣೆಗೆ ಒಳಪ‍ಡಿಸಿದಾಗ ಆತ ಇಡೀ ಜಾಲದ ಬಗ್ಗೆ ಬಾಯ್ಬಿಟ್ಟಿದ್ದ.

ಇದೇ ವೇಳೆ ಪರಶುರಾಮ್ ಹಾಗೂ ಸುಮಿತ್ ಎಂಬುವರು ಬೇರೊಂದು ಪ್ರಕರಣದಲ್ಲಿ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಪಂಜಾಬ್‌ನ ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ತಾವು ಭಾಗಿಯಾಗಿರುವುದಾಗಿ ಅವರೂ ತಪ್ಪೊಪ್ಪಿಕೊಂಡಿದ್ದರು. ನಂತರ ಎರಡು ರಾಜ್ಯಗಳ ಪೊಲೀಸರು ಜಾಲದ ಹೆಡೆಮುರಿ ಕಟ್ಟಲು ರಾಜ್ಯ ಸರ್ಕಾರದ ನೆರವು ಕೋರಿದ್ದರು. ಹೀಗಾಗಿ, ಇದೇ ಜುಲೈ 27ರಂದು ಪ್ರಕರಣ ಸಿಐಡಿಗೆ ವರ್ಗವಾಗಿತ್ತು.

ನ.16ರಂದು ಬಾಗಲೂರು ಮುಖ್ಯರಸ್ತೆಯ ‘ಪ್ರಿನ್ಸ್’ ಹೋಟೆಲ್‌, ಯಲಹಂಕದ ಶ್ರೇಯಸ್ ಹೋಟೆಲ್ ಹಾಗೂ ಚಿಕ್ಕಜಾಲದ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ ನಕಲಿ ಪಿಸ್ತೂಲ್, ಮಾರಕಾಸ್ತ್ರಗಳು ಹಾಗೂ ದೊಣ್ಣೆಗಳನ್ನು ಜಪ್ತಿ ಮಾಡಿದ್ದರು. ಅವರ ವಶದಲ್ಲಿದ್ದ ಬಾಂಗ್ಲಾದೇಶದ 12 ಯುವಕರನ್ನೂ ರಕ್ಷಿಸಿದ್ದರು.

ಜಾಲದ ಇತರ ಸದಸ್ಯರಾದ ದೆಹಲಿಯ ಪ್ರದೀಪ್, ಜೆ.ಡಿ.ಪಾಟೀಲ್, ಹರಿಯಾಣದ ಸುನೀಲ್ ಕುಮಾರ್, ಪರ್ಮಿಂದರ್ ಜೂನ್ ಅಲಿಯಾಸ್ ಕಾಲಾ, ಮನೀಷ್ ಹಾಗೂ ಮುಂಬೈನ ಅಜಾಝ್ ಅಹಮದ್ ಎಂಬುವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಮೂರೂ ರಾಜ್ಯಗಳ ಪೊಲೀಸರು ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.