ADVERTISEMENT

ಗರ್ಭಕೋಶಕ್ಕೆ ಅನಾವಶ್ಯಕ ಕತ್ತರಿ ! : ಪಿಐಎಲ್‌ ವಜಾ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 19:33 IST
Last Updated 8 ಜೂನ್ 2019, 19:33 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯದ ವಿವಿಧೆಡೆ ವೈದ್ಯರು ಸಾಕಷ್ಟು ಪ್ರಕರಣಗಳಲ್ಲಿ ಅವಶ್ಯಕತೆ ಇಲ್ಲದಿದ್ದರೂ ಗರ್ಭಕೋಶ ತೆಗೆಯಲು ಮುಂದಾಗಿರುವುದು ಪತ್ತೆಯಾಗಿದೆ. ಇದನ್ನು ತಡೆಯುವುದಕ್ಕೆ ಕಠಿಣ ಕಾನೂನು ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಕವಯಿತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಸಲ್ಲಿಸಿದ್ದ ಅರ್ಜಿಯ‌ನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ಸಾಧ್ಯವಿಲ್ಲ: ‘ವೈದ್ಯರು ತಮ್ಮ ವೃತ್ತಿಯಲ್ಲಿ ಏನಾದರೂ ದುರಾಚಾರ ನಡೆಸಿದ್ದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ವೈದ್ಯಕೀಯ ಮಂಡಳಿ ಸಕ್ಷಮ ಪ್ರಾಧಿಕಾರ ಎನಿಸಿದೆ. ಹೀಗಾಗಿ ಅಂತಹ ಆರೋಪಗಳಿದ್ದರೆ ಅಲ್ಲಿಯೇ ಪರಿಹಾರ ಪಡೆಯಬಹುದು. ಆದ್ದರಿಂದ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

‘ರಾಜ್ಯದಲ್ಲಿ ಬಡವರು ಮತ್ತು ಹಟ್ಟಿಗಳಲ್ಲಿ ವಾಸಿಸುವಂತಹ ಮಹಿಳೆಯರು ಈ ಶಸ್ತ್ರಚಿಕಿತ್ಸೆಗೆ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಇದರ ಸಾಧಕ–ಬಾಧಕಗಳ ಅಧ್ಯಯನ ನಡೆಸಿ ಮಹಿಳಾ ಆಯೋಗಕ್ಕೆ ಸಲ್ಲಿಸಲಾದ ವರದಿಯಿಂದ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

‘ವೈದ್ಯರ ಈ ಪ್ರವೃತ್ತಿಯನ್ನು ನಿಯಂತ್ರಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು. ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶಿಸಬೇಕು. ಇಂತಹ ಕೃತ್ಯಗಳಿಗೆ ತಪ್ಪಿತಸ್ಥ ವೈದ್ಯರನ್ನು ಹೊಣೆಗಾರನ್ನಾಗಿ ಮಾಡಲು ಸೂಕ್ತ ನಿರ್ವಹಣಾ ವ್ಯವಸ್ಥೆ ರೂಪಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.