ADVERTISEMENT

ಬೆಂಗಳೂರಿನ ಉದ್ಯಮಿ ಸೆರೆ

ತೆರಿಗೆ ವಂಚಿಸಿ ವಿದೇಶಕ್ಕೆ ಪರಾರಿ ಆಗುತ್ತಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:22 IST
Last Updated 12 ಫೆಬ್ರುವರಿ 2019, 19:22 IST

ಬೆಂಗಳೂರು: ತೆರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗುತ್ತಿದ್ದ ನಗರದ ಉದ್ಯಮಿಯೊಬ್ಬರನ್ನು ಅದಾಯ ತೆರಿಗೆ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ವಿದೇಶಕ್ಕೆ ಹೊರಟಿದ್ದ ಉದ್ಯಮಿಯನ್ನು ಸೋಮವಾರ ಬಂಧಿಸಲಾಗಿದೆ. ಆರೋಪಿಯನ್ನು ಇಂದು ತೆರಿಗೆ ವಸೂಲಾತಿ ಅಧಿಕಾರಿ ಮುಂದೆ ಹಾಜರುಪಡಿಸಲಾಯಿತು. ತೆರಿಗೆ ಕಟ್ಟುವುದಕ್ಕೆ ಸಂಬಂಧಿಸಿದಂತೆ ಅವರು ಸರಿಯಾದ ಉತ್ತರ ನೀಡದಿದ್ದರಿಂದ ಆರು ತಿಂಗಳು ಸೆರೆವಾಸ ವಿಧಿಸಲಾಗಿದೆ.

ಉದ್ಯಮಿ ₹ 12 ಕೋಟಿ ತೆರಿಗೆ, ದಂಡ ಕಟ್ಟಬೇಕಿತ್ತು. ಇದರ ಜೊತೆಗೆ ಬಡ್ಡಿಯನ್ನೂ ಪಾವತಿಸಬೇಕಿತ್ತು. ಆದರೆ, ಯಾವುದನ್ನೂ ಪಾವತಿಸದೆ ತಮ್ಮ ಆಸ್ತಿ ವರ್ಗಾವಣೆ ಮಾಡಿ ವಿದೇಶಕ್ಕೆ ಹೊರಟಿದ್ದರು ಎಂದು ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ. ತೆರಿಗೆ ಬಾಕಿ ಪಾವತಿಸದೆ ಆಸ್ತಿ ವರ್ಗಾವಣೆ ಮಾಡುವುದು ಆದಾಯ ತೆರಿಗೆ ಕಾಯ್ದೆಗೆ ವಿರುದ್ಧವಾದ ಕ್ರಮ. ಈ ಕಾರಣಕ್ಕೆ ಉದ್ಯಮಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.