ಇಬ್ಬಲೂರು ಜಂಕ್ಷನ್ (ಸಂಗ್ರಹ ಚಿತ್ರ)
ಬೆಂಗಳೂರು: ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್‌ವರೆಗೆ ಸಂಚಾರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಹೊಸ ಕ್ರಮದಿಂದ ದಟ್ಟಣೆ ಅವಧಿಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸುತ್ತಿವೆ. ಈ ಭಾಗದಲ್ಲಿ ಸಂಜೆ ವೇಳೆ ವಾಹನ ದಟ್ಟಣೆ ತೀವ್ರವಾಗಿತ್ತು. ಸಾಲುಗಟ್ಟಿ ವಾಹನಗಳು ನಿಲುತ್ತಿದ್ದವು.
ಹೊರವರ್ತುಲ ರಸ್ತೆಯ ಇಕೊಸ್ಪೇಸ್ ಕಡೆಯಿಂದ ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ತೆರಳಲು, ಎಕೊಸ್ಪೇಸ್ ಜಂಕ್ಷನ್‌ನಿಂದ ದೇವರಬೀಸನಹಳ್ಳಿವರೆಗಿನ ಮೇಲ್ಸೇತುವೆ ಮಧ್ಯದ ರಸ್ತೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಸುಧಾರಣೆ ಕ್ರಮದಿಂದ ಎಕೊಸ್ಪೇಸ್, ಇಂಟೆಲ್, ಗ್ಲೋಬಲ್ ಟೆಕ್ ಪಾರ್ಕ್ ಸೇರಿದಂತೆ ಐ.ಟಿ ಪಾರ್ಕ್‌ಗಳಿಗೆ ವಾಹನಗಳು ತೆರಳಲು ಅನುಕೂಲವಾಗಿದೆ.
ಅಲ್ಲದೇ ಹೊರವರ್ತುಲ ರಸ್ತೆಯ ಬೆಳ್ಳಂದೂರು ಜಂಕ್ಷನ್‌ನಿಂದ ಎಕೊಸ್ಪೇಸ್ ಕಡೆಗೆ ವಾಹನಗಳು ತೆರಳಲು ಅನುಕೂಲ ಆಗುವಂತೆ, ಬೆಳ್ಳಂದೂರು ಜಂಕ್ಷನ್‌ನಿಂದ ಎಕೊಸ್ಪೇಸ್‌ವರೆಗಿನ ಮೇಲ್ಸೇತುವೆಯ ಮಧ್ಯದ ರಸ್ತೆಯನ್ನು ತೆರವು ಮಾಡಲಾಗಿದೆ. ಇದರಿಂದ ಮಾರತ್‌ಹಳ್ಳಿ ಸೇರಿದಂತೆ ವಿವಿಧ ಕಡೆಗೆ ವಾಹನಗಳು ಶೀಘ್ರವಾಗಿ ತೆರಳುವುದಕ್ಕೆ ಅವಕಾಶವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.