
ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಸುವರ್ಣ ಮಹೋತ್ಸವ ಕಾರ್ಯಕ್ರಮದ ಪ್ರಚಾರಕ್ಕೆ ಬ್ಯಾನರ್ ಅಳವಡಿಸಲು ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹1 ಸಾವಿರ ಭರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯ ಈ ನಡೆಗೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಧ್ಯಕ್ಷತೆಯಲ್ಲಿ ಅ. 28ರಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ‘ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಇದಕ್ಕಾಗಿ ರಾಜ್ಯದಲ್ಲಿರುವ 69,922 ಅಂಗನವಾಡಿ ಕೇಂದ್ರಗಳಲ್ಲಿ ಬ್ಯಾನರ್ ಅಳವಡಿಸಿ, ಪ್ರಚಾರ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
’ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ಕಟ್ಟಡಗಳ ನಿರ್ವಹಣಾ ವೆಚ್ಚದ ಅನುದಾನ ನೀಡಲಾಗಿದೆ. ಇದರಲ್ಲಿ ಎಷ್ಟು ಅಂಗನವಾಡಿ ಕೇಂದ್ರಗಳಲ್ಲಿ ₹ 1 ಸಾವಿರ ಬಾಕಿ ಉಳಿದಿದೆ? ಎಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಅನುದಾನ ಇಲ್ಲ? ಅನುದಾನ ಬಾಕಿ ಉಳಿದಿಲ್ಲ ಎಂದಾದರೆ ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ತಕ್ಷಣ ನೀಡಬೇಕು’ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆ ಸೂಚಿಸಿದೆ.
ರಾಜ್ಯದಾದ್ಯಂತ ಏಕರೂಪ ಮಾದರಿ ಅನುಸರಿಸುವ ಉದ್ದೇಶದಿಂದ 6 ಅಡಿ ಅಗಲ, 4 ಅಡಿ ಎತ್ತರದ ಬ್ಯಾನರ್ ಮುದ್ರಿಸಿ ಸರಬರಾಜು ಮಾಡಲು ದರ ಪಟ್ಟಿ ಆಹ್ವಾನಿಸಲಾಗಿತ್ತು. ಇದರಲ್ಲಿ ಝೇಂಕಾರ್ ಅಡ್ವರ್ಟೈಸಿಂಗ್ ಸಂಸ್ಥೆಯು ಕನಿಷ್ಠ ₹996 ದರ ನಿಗದಿಪಡಿಸಿದೆ. ಅಂಗನವಾಡಿಗಳಿಗೆ 2023–24 ಹಾಗೂ 2024–25ನೇ ಸಾಲಿನ ನಿರ್ವಹಣಾ ವೆಚ್ಚವಾಗಿ ಇಲಾಖೆಯು ತಲಾ ₹ 3 ಸಾವಿರ ಅನುದಾನ ನೀಡಿತ್ತು. ಈ ಅನುದಾನದಲ್ಲಿ ₹ 1 ಸಾವಿರವನ್ನು ಬ್ಯಾನರ್ ವೆಚ್ಚವಾಗಿ ಇಲಾಖೆಗೆ ನೀಡಬೇಕು. ಈ ಬ್ಯಾನರ್ ಆರು ತಿಂಗಳವರೆಗೆ ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
‘ನಿರ್ವಹಣೆಗಾಗಿ ವಾರ್ಷಿಕ ₹3 ಸಾವಿರ ನೀಡಲಾಗುತ್ತದೆ. ಅಂಗನವಾಡಿ ಕೇಂದ್ರದ ಮೂಲಸೌಲಭ್ಯ ನಿರ್ವಹಣೆ, ಸ್ಟೇಷನರಿ, ಪಾತ್ರೆಗಳ ಖರೀದಿಗೆ ಇದನ್ನು ಬಳಸಲಾಗುತ್ತದೆ. ಇದರಲ್ಲಿಯೇ ₹1 ಸಾವಿರ ನೀಡಿ ಬ್ಯಾನರ್ ಖರೀದಿಸುವಂತೆ ಇಲಾಖೆ ಸೂಚಿಸಿರುವುದು ಸರಿಯಲ್ಲ’ ಎಂದು ಬೆಂಗಳೂರು ನಗರ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.