ADVERTISEMENT

ರಾಜ್ಯದಾದ್ಯಂತ ‘ನಾವೆದ್ದು ನಿಲ್ಲದಿದ್ದರೆ’ ಆಂದೋಲನ

ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಮಹಿಳಾ ಸಂಘಟನೆಗಳಿಂದ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 18:23 IST
Last Updated 5 ಸೆಪ್ಟೆಂಬರ್ 2020, 18:23 IST
ಮನೆಗೆಲಸದ ಕಾರ್ಮಿಕರ ಸಂಘದ ಸದಸ್ಯರು ಕೋರಮಂಗಲದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು 
ಮನೆಗೆಲಸದ ಕಾರ್ಮಿಕರ ಸಂಘದ ಸದಸ್ಯರು ಕೋರಮಂಗಲದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು    

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿವಿಧ ಮಹಿಳಾ ಸಂಘಟನೆಗಳು ‘ನಾವೆದ್ದು ನಿಲ್ಲದಿದ್ದರೆ’ ಘೋಷವಾಕ್ಯದಡಿ ರಾಜ್ಯದಾದ್ಯಂತ ಶನಿವಾರ ಆಂದೋಲನ ನಡೆಸಿದವು.

‘ಭಾರತೀಯ ಕೃಷಿಯನ್ನು ಸಂರಕ್ಷಿಸಿ’, ‘ದ್ವೇಷ ನಿಲ್ಲಿಸಿ ಸಹೋದರತ್ವ ನಿರ್ಮಾಣ ಮಾಡಿ’, ‘ನಮ್ಮೂರ ಭೂಮಿ ನಮಗಿರಲಿ’, ‘ಪ್ರಜಾಪ್ರಭುತ್ವದ ಸಾವು’, ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ’ ಎಂಬ ಸಾಲುಗಳುಳ್ಳ ಭಿತ್ತಿಪತ್ರಗಳನ್ನು ಮಹಿಳೆಯರು ಪ್ರದರ್ಶಿಸಿದರು.ಲಾಕ್‌ಡೌನ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ವಿವಿಧ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮಹಿಳಾ ಸಂಘಟನೆಗಳ ಹಕ್ಕೊತ್ತಾಯಗಳು

ADVERTISEMENT

*ಲಾಕ್‌ಡೌನ್‌ ಪರಿಣಾಮದಿಂದಅಸಂಘಟಿತ ವಲಯದ ಕಾರ್ಮಿಕರು, ಬಹುಪಾಲು ಮಹಿಳೆಯರು, ಲೈಂಗಿಕ ಕಾರ್ಯಕರ್ತರು ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಪ್ರಮಾಣದ ಹಣಕಾಸು ನೆರವು ಒದಗಿಸುವ ಸಂಸ್ಥೆಗಳು ಸ್ವಸಹಾಯ ಸಂಘಗಳಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಿಗೆ ಮುಂದಾಗುತ್ತಿವೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು

*ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಮತ್ತು ರಾಜಕೀಯ ಪಕ್ಷಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ನೀಡಬೇಕು.

*ಕೃಷಿ ಭೂಮಿಯಿಂದ ವಂಚಿತರಾಗಿರುವ ಮಹಿಳೆಯರಿಗೆ ಮತ್ತು ದಲಿತರಿಗೆ ಭೂಮಿಯ ಹಕ್ಕನ್ನು ನೀಡಬೇಕು

*ಅನೌಪಚಾರಿಕ ಕ್ಷೇತ್ರದ ಮಹಿಳೆಯರಿಗೆ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ ನೀಡಬೇಕು. ಮನೆ ಕೆಲಸ, ಜವಳಿ ಉದ್ಯಮ, ಆಶಾ ಕಾರ್ಯಕರ್ತೆಯರು, ಸ್ವಚ್ಛತಾ ಕಾರ್ಮಿಕರು ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡಬೇಕು

*ಸ್ವಸಹಾಯ ಸಂಘಗಳ ಮತ್ತು ಜೀವಿಕಾ ಮಿಷನ್ ಗುಂಪುಗಳ ಹಾಗೂ ಸಣ್ಣ ರೈತ ಕಾರ್ಮಿಕರ ಸಾಲಗಳನ್ನು ಮನ್ನಾ ಮಾಡಬೇಕು. ಲಾಕ್ ಡೌನ್ ಅವಧಿಯಲ್ಲಿ ಸುಸ್ತಿಯಾಗಿರುವ ಕಂತುಗಳನ್ನು ಮನ್ನಾ ಮಾಡಬೇಕು.

* ಶೈಕ್ಷಣಿಕ ಸಾಲಗಳಿಗೆ ಬಡ್ಡಿ ವಿನಾಯ್ತಿ ನೀಡಬೇಕು. ಸ್ವಯಂ ಉದ್ಯೋಗಕ್ಕೆ ₹10 ಲಕ್ಷ ಸಾಲವನ್ನು ಶೇ 4ರ ಬಡ್ಡಿ ದರದಲ್ಲಿ ನೀಡಲು ನಿಯಮ ರೂಪಿಸಬೇಕು.

* ಮಹಿಳೆಯರ ಮೇಲೆ ಮತ್ತು ತೃತೀಯಲಿಂಗಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯತಡೆಗಟ್ಟಬೇಕು. ತೃತೀಯ ಲಿಂಗಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.