ADVERTISEMENT

ಐಐಎಸ್‌ಸಿಯಲ್ಲಿ ಮುಕ್ತ ದಿನ ನಾಳೆ

300 ಸಂಸ್ಥೆಗಳು, 6 ಸಾವಿರ ಜನರಿಂದ ನೋಂದಣಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:07 IST
Last Updated 21 ಮಾರ್ಚ್ 2019, 20:07 IST
ಐಐಎಸ್‌ಸಿಯಲ್ಲಿ ಮುಕ್ತ ದಿನಕ್ಕೆ ನಡೆಯುತ್ತಿರುವ ಸಿದ್ಧತೆ – ಪ್ರಜಾವಾಣಿ ಚಿತ್ರ
ಐಐಎಸ್‌ಸಿಯಲ್ಲಿ ಮುಕ್ತ ದಿನಕ್ಕೆ ನಡೆಯುತ್ತಿರುವ ಸಿದ್ಧತೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಶನಿವಾರ ನಡೆಯಲಿರುವ ‘ಮುಕ್ತ ದಿನ’ಕ್ಕೆ 300 ಸಂಸ್ಥೆಗಳು ಮತ್ತು 6 ಸಾವಿರ ಮಂದಿ ವೈಯಕ್ತಿಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮುಕ್ತ ದಿನ ಸಮಿತಿ ಅಧ್ಯಕ್ಷ ವೈ.ನರಹರಿ ತಿಳಿಸಿದರು.

ಇದೇ ಮೊದಲ ಬಾರಿಗೆ ವೆಬ್‌ ಪೋರ್ಟಲ್‌ನಲ್ಲಿ(openday.iisc.ac.in) ಆನ್‌ಲೈನ್ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ನೋಂದಣಿ ಕಡ್ಡಾಯವಲ್ಲ, ನೇರವಾಗಿ ಮುಕ್ತ ದಿನಕ್ಕೆ ಬಂದರೂ ಅವಕಾಶ ಲಭ್ಯವಿದೆ. ನೋಂದಣಿ ಮಾಡಿಕೊಂಡರೆ ಸಿದ್ಧತೆಗೆ ಅನುಕೂಲ ಆಗಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಸಿರು ಉಳಿಸುವ ಪರಿಸರ ಕಾಳಜಿಯ ಭಾಗವಾಗಿ ಸಂಸ್ಥೆಯ ಆವರಣದಲ್ಲಿ ಇ–ರಿಕ್ಷಾ ಸಂಚಾರ ಆರಂಭಿಸಲಾಗಿದೆ. ಮುಕ್ತ ದಿನಕ್ಕೆ ಬರುವ ಜನರು ಸಂಸ್ಥೆಯ ಆವರಣದೊಳಗೆ ಒಂದೆಡೆಯಿಂದ ಮತ್ತೊಂದೆಡೆಗೆ ಇ–ರಿಕ್ಷಾಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದರು.

ADVERTISEMENT

ಭದ್ರತೆ ಮತ್ತು ವಾಹನ ನಿಲುಗಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸದಾಶಿವನಗರ, ಯಶವಂತಪುರ ಮತ್ತು ಮಲ್ಲೇಶ್ವರ ಪೊಲೀಸರ ಸಹಕಾರ ಕೇಳಲಾಗಿದ್ದು, 60ರಿಂದ 100 ಜನ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. ಜತೆಗೆ ಸಂಸ್ಥೆಯ 75 ಸಿಬ್ಬಂದಿ ಕೂಡ ಭದ್ರತೆ ನೋಡಿಕೊಳ್ಳಲಿದ್ದಾರೆ. ಕೆಲವರು ಸಮವಸ್ತ್ರ ರಹಿತವಾಗಿ ಜನರ ಚಲನ ವಲನ ಗಮನಿಸಲಿದ್ದಾರೆ.20 ಕಡೆ ಲೋಹ ಶೋಧಕಗಳನ್ನು ಅಳವಡಿಸಲಾಗುವುದು ಎಂದು ಸಂಸ್ಥೆಯ ಭದ್ರತೆ ಸಲಹೆಗಾರ ಚಂದ್ರಶೇಖರ್ ತಿಳಿಸಿದರು.

ಏರೋ ಇಂಡಿಯಾದ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಅವಘಡದ ಹಿನ್ನೆಲೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ಅಗ್ನಿಶಾಮಕ ವಾಹನ ಮತ್ತು ನಾಲ್ಕು ಆಂಬುಲೆನ್ಸ್ ಒದಗಿಸುವಂತೆ ಅಗ್ನಿ ಶಾಮಕ ಇಲಾಖೆಗೆ ಕೇಳಲಾಗಿದೆ. ನಮ್ಮದೇ ಆದ ಅಗ್ನಿ ಶಾಮಕ ಉಪಕರಣಗಳಿದ್ದು, ಅವುಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.