ADVERTISEMENT

ನೀರು ಒದಗಿಸಲು ತಂತ್ರಜ್ಞಾನ ಬಳಕೆ ಹೆಚ್ಚಿಸಿ: ಐಐಎಸ್ಸಿ ಪ್ರಾಧ್ಯಾಪಕಿ ಮಾಧವಿ ಲತಾ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 18:41 IST
Last Updated 17 ಜನವರಿ 2026, 18:41 IST
ಬೆಂಗಳೂರು ಜಲಮಂಡಳಿ ಎಂಜಿನಿಯರ್‌ಗಳ ಸಂಘದ ತಾಂತ್ರಿಕ ದಿನಚರಿ ಬಿಡುಗಡೆ ಸಮಾರಂಭದಲ್ಲಿ ಬಿ.ಎಸ್‌.ದಲಾಯತ್‌, ಸಿ.ಜಿ.ಗಂಗಾಧರ್‌, ಡಾ.ರಾಮಪ್ರಸಾತ್‌ ಮನೋಹರ್‌, ಮಾಧವಿ ಲತಾ, ರಾಜಶೇಖರ್‌ ಹಾಜರಿದ್ದರು.
ಬೆಂಗಳೂರು ಜಲಮಂಡಳಿ ಎಂಜಿನಿಯರ್‌ಗಳ ಸಂಘದ ತಾಂತ್ರಿಕ ದಿನಚರಿ ಬಿಡುಗಡೆ ಸಮಾರಂಭದಲ್ಲಿ ಬಿ.ಎಸ್‌.ದಲಾಯತ್‌, ಸಿ.ಜಿ.ಗಂಗಾಧರ್‌, ಡಾ.ರಾಮಪ್ರಸಾತ್‌ ಮನೋಹರ್‌, ಮಾಧವಿ ಲತಾ, ರಾಜಶೇಖರ್‌ ಹಾಜರಿದ್ದರು.   

ಬೆಂಗಳೂರು: ‘ಬೆಂಗಳೂರು ಜನರಿಗೆ ನೀರು ಒದಗಿಸಲು ಜಲಮಂಡಳಿ ಎಂಜಿನಿಯರ್‌ಗಳ ತಂಡ ಶ್ರಮಿಸುತ್ತಿದ್ದು, ಎಲ್ಲರಿಗೂ ನೀರು ಲಭ್ಯವಾಗುವಂತೆ ಮಾಡಲು ಪರಿಣಾಮಕಾರಿಯಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕಿ ಜಿ.ಮಾಧವಿ ಲತಾ ಸಲಹೆ ನೀಡಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ಗಳ ಸಂಘ ಆಯೋಜಿಸಿದ್ದ ತಾಂತ್ರಿಕ ದಿನಚರಿ ಬಿಡುಗಡೆ ಹಾಗೂ ನಿವೃತ್ತ ಎಂಜಿನಿಯರ್‌ಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನೀರಿನ ಸೋರಿಕೆ, ಅನಿರೀಕ್ಷಿತ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತಾ ಕಾವೇರಿ ನದಿಯಿಂದ ಬೆಂಗಳೂರು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿರುವ ಎಂಜಿನಿಯರ್‌ಗಳ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ADVERTISEMENT

‘ಭಾರತದ ನಿರ್ಮಾಣಕ್ಕೆ ಸಿವಿಲ್‌, ಮೆಕ್ಯಾನಿಕಲ್ ಎನ್ನದೇ ಪ್ರತಿಯೊಬ್ಬ ಎಂಜಿನಿಯರ್‌ಗಳ ಶ್ರಮ ಬಹಳಷ್ಟಿದೆ. ಒಂದು ಹೊಸ ಯೋಜನೆ ಅನುಷ್ಠಾನ ಮಾಡಲು ಮುಂದಾದರೆ, ಎಷ್ಟೆಲ್ಲಾ ತೊಡಕುಗಳು ಎದುರಾಗುತ್ತವೆ ಎಂಬುದು ಎಂಜಿನಿಯರ್‌ಗಳಿಗೆ ಮಾತ್ರ ಅರ್ಥ ಆಗಲಿದೆ. ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸುತ್ತಲೇ ಪರಿಹಾರ ಕಂಡುಕೊಂಡು ಜನರ ಉಪಯೋಗಕ್ಕೆ ಸಿಗುವಂತೆ ಮಾಡುವುದೇ ಎಂಜಿನಿಯರ್‌ಗಳ ನಿಜವಾದ ಕೆಲಸ’ ಎಂದು ನುಡಿದರು.

ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್‌ ಮನೋಹರ್‌ ಮಾತನಾಡಿ, ‘ಸವಾಲು ಎದುರಿಸಲು ಎಂಜಿನಿಯರ್‌ಗಳು ಸಿದ್ಧರಿರಬೇಕು. ಹೊಸ ಆಲೋಚನೆಗಳ ಮೂಲಕ ನಾಗರಿಕರಿಗೆ ಅನುಕೂಲವಾಗುವ ಯೋಜನೆ ರೂಪಿಸಿ ಅನುಷ್ಠಾನ ಮಾಡಲು ಮಂಡಳಿ ಪ್ರತಿಯೊಬ್ಬರು ಶ್ರಮಿಸಬೇಕು’ ಎಂದು ಹೇಳಿದರು.

ಪ್ರಧಾನ ಮುಖ್ಯ ಎಂಜಿನಿಯರ್ ಬಿ.ಎಸ್.ದಲಾಯತ್, ಸಂಘದ ಅಧ್ಯಕ್ಷ ಬಿ.ಸಿ.ಗಂಗಾಧರ, ಉಪಾಧ್ಯಕ್ಷ ರಮಾನಂದ, ಕಾರ್ಯದರ್ಶಿ ಎ.ರಾಜಶೇಖರ, ಖಜಾಂಚಿ ಎಸ್‌.ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.