ADVERTISEMENT

ಐಐಎಸ್‌ಸಿ ಸಂಶೋಧನಾ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 19:23 IST
Last Updated 18 ಜನವರಿ 2019, 19:23 IST

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಸುಮಾರು 300 ಸಂಶೋಧನಾ ವಿದ್ಯಾರ್ಥಿಗಳು ಶುಕ್ರವಾರ 12 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು.

ನವದೆಹಲಿಯಲ್ಲಿ ಪ್ರತಿಭಟನೆ ನಿರತ ಸಂಶೋಧನಾ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ದೆಹಲಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಸ್ಟೈಫಂಡ್‌ ಮೊತ್ತವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು.

ADVERTISEMENT

‘ದೆಹಲಿಯಲ್ಲಿ ಪ್ರತಿಭಟನಕಾರರು ದುಂಡಾವರ್ತಿ ಪ್ರದರ್ಶಿಸಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಪೊಲೀಸರು ಸಂಶೋಧನಾ ವಿದ್ಯಾರ್ಥಿಗಳನ್ನು ಅಪರಾಧಿಗಳನ್ನು ನಡೆಸಿಕೊಳ್ಳುವಂತೆ ನಡೆಸಿಕೊಂಡರು. ಸಾವಿರಾರು ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಅವರು, ನಮ್ಮನ್ನು ದುಷ್ಕರ್ಮಿಗಳಂತೆ ನಡೆಸಿಕೊಂಡಿದ್ದು ಏತಕ್ಕೆ? ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು ಕೇಳುವ ಅಧಿಕಾರವಿದೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.

‘ಈಗ ಕಿರಿಯ ಸಂಶೋಧನಾ ವಿದ್ಯಾರ್ಥಿಗೆ ತಿಂಗಳಿಗೆ ತಲಾ ₹ 25,000 ಮತ್ತು ಹಿರಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ತಲಾ ₹28,000 ಸ್ಟೈಫಂಡ್‌ ನೀಡಲಾಗುತ್ತಿದೆ. ದೈನಂದಿನ ಅಗತ್ಯ ಪೂರೈಸುವುದೇ ಕಷ್ಟವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ನಮ್ಮನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.