ADVERTISEMENT

ಬೆಂಗಳೂರು | ಪೂರ್ವ ನಗರ ಪಾಲಿಕೆ: ಅನಧಿಕೃತ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 23:03 IST
Last Updated 22 ಜನವರಿ 2026, 23:03 IST
ನಲ್ಲೂರಹಳ್ಳಿ, ವಿಕ್ಟೋರಿಯಾ ವ್ಯೂ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿದ್ದ ಕಟ್ಟಡವನ್ನು ನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು
ನಲ್ಲೂರಹಳ್ಳಿ, ವಿಕ್ಟೋರಿಯಾ ವ್ಯೂ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿದ್ದ ಕಟ್ಟಡವನ್ನು ನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ಪೂರ್ವ ನಗರ ಪಾಲಿಕೆಯ ವೈಟ್‌ ಫೀಲ್ಡ್ ಉಪವಿಭಾಗ ವ್ಯಾಪ್ತಿಯ ನಲ್ಲೂರಹಳ್ಳಿ, ವಿಕ್ಟೋರಿಯಾ ವ್ಯೂ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಲಾಯಿತು ಎಂದು ಆಯುಕ್ತ ಡಿ.ಎಸ್.ರಮೇಶ್ ಅವರು ತಿಳಿಸಿದರು.

ನಕ್ಷೆ ಮಂಜೂರಾತಿ ಪಡೆಯದೇ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ಆರು ಮಹಡಿ ಕಟ್ಟಡದ ತೆರವು ಕಾರ್ಯಾಚರಣೆಯನ್ನು ಮಹದೇವಪುರ ವಲಯದ ಜಂಟಿ ಆಯುಕ್ತರಾದ ಕೆ. ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ಗುರುವಾರ ನಡೆಸಲಾಯಿತು.

ಶ್ರೀಕಾಂತ್ ರೆಡ್ಡಿ ಅವರಿಗೆ ಸೇರಿದ ನಿವೇಶನದಲ್ಲಿ ಆರು ಮಹಡಿಗಳ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಲಾಗುತ್ತಿತ್ತು. ನಕ್ಷೆ ಮಂಜೂರಾತಿ ಪಡೆಯದೇ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ದೃಢಪಟ್ಟಿತ್ತು. ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿದ ಬಳಿಕ ನೈಸರ್ಗಿಕ ನ್ಯಾಯದಡಿ ಸಾಕಷ್ಟು ಕಾಲಾವಕಾಶ ನೀಡಿದರೂ ತೆರವುಗೊಳಿಸಲಿಲ್ಲ. ಹೀಗಾಗಿ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ನಡೆಯಿತು ಎಂದು ಮಾಹಿತಿ ನೀಡಿದರು.

ADVERTISEMENT

ಅಕ್ರಮ ಕಟ್ಟಡಗಳು ಸಾರ್ವಜನಿಕ ಸುರಕ್ಷತೆ ಮತ್ತು ಯೋಜಿತ ನಗರ ಅಭಿವೃದ್ಧಿಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ, ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದು, ಮುಂದೆಯೂ ಇಂತಹ ಅಕ್ರಮ ನಿರ್ಮಾಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಮೊದಲು ಅಗತ್ಯ ಅನುಮೋದನೆಗಳನ್ನು ಪಡೆದು, ಅನುಮೋದಿತ ನಕ್ಷೆ ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾಗರಿಕರು, ಕಟ್ಟಡ ಮಾಲೀಕರು ಹಾಗೂ ಬಿಲ್ಡರ್‌ಗಳಲ್ಲಿ ಮನವಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಜೆಟ್‌: ಸಲಹೆಗೆ ಆಹ್ವಾನ

ಬೆಂಗಳೂರು ಉತ್ತರ ನಗರ ಪಾಲಿಕೆಯ 2026-27ನೇ ಸಾಲಿನ ಬಜೆಟ್‌ಗೆ ನಾಗರಿಕರು ಸಂಘ ಸಂಸ್ಥೆಗಳು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎನ್‌ಜಿಒಗಳು ಸಲಹೆಗಳನ್ನು ನೀಡಬಹುದು ಎಂದು ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು. ಮೂಲ ಸೌಕರ್ಯ ಅಭಿವೃದ್ಧಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಪರಿಸರ ಸಂರಕ್ಷಣೆ ಸಾಮಾಜಿಕ ಕಲ್ಯಾಣ ಹಾಗೂ ಪಾರದರ್ಶಕ ಆಡಳಿತ ಸಾರ್ವಜನಿಕರ ಅಗತ್ಯಗಳಿಗೆ ಸ್ಪಂದಿಸುವ ಯೋಜನೆಗಳಿಗೆ ಆದ್ಯತೆ ನೀಡುವುದು ನಗರ ಪಾಲಿಕೆಯ ಮೂಲ ಧ್ಯೇಯ. ಈ ಹಿನ್ನೆಲೆಯಲ್ಲಿ ನಾಗರಿಕರು ಸಲಹೆಗಳನ್ನು ನೀಡಬಯಸಿದಲ್ಲಿ ಉಪ ನಿಯಂತ್ರಕರು (ಹಣಕಾಸು) ಬೆಂಗಳೂರು ಉತ್ತರ ನಗರ ಪಾಲಿಕೆ ಕಟ್ಟಡ ಅಮೃತಹಳ್ಳಿ ಮುಖ್ಯರಸ್ತೆ ಬ್ಯಾಟರಾಯನಪುರ ಬೆಂಗಳೂರು -92 ಇಲ್ಲಿಗೆ ಸಲ್ಲಿಸಬಹುದು  ಅಥವಾ ಇ–ಮೇಲ್‌ dcfbncc@gmail.com ಮೂಲಕ ಜ.29ರೊಳಗೆ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.