ADVERTISEMENT

ಅನಧಿಕೃತ ಕಟ್ಟಡ; ಶಿಕ್ಷೆ ಪ್ರಮಾಣದ ನಿಯಮ ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:33 IST
Last Updated 19 ನವೆಂಬರ್ 2019, 2:33 IST

ಬೆಂಗಳೂರು: ಖಾಸಗಿ ಸ್ವತ್ತುಗಳಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಅಧಿಕಾರಿಗಳನ್ನು, ಕರ್ನಾಟಕ ಪೌರಾಡಳಿತ ಕಾಯ್ದೆ–1976ರ ಅನ್ವಯ ದಂಡನೀಯ ಶಿಕ್ಷೆಗೆ ಗುರಿಪಡಿಸಲು ನಿಗದಿಪಡಿಸಿದ ನಿಯಮಗಳನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.

ಈ ಕುರಿತಂತೆ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಪಿ.ಬಿ ಅಚ್ಚಪ್ಪ ಅವರು, ‘ನವೆಂಬರ್ 16ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಅಂತಿಮ ಅಧಿಸೂಚನೆ ಪ್ರತಿಯನ್ನು ನ್ಯಾಯಪೀಠಕ್ಕೆ ನೀಡಿದರು. ಇದಕ್ಕೆ ಎಸ್.ಉಮಾಪತಿ, ‘ಅಧಿಸೂಚನೆ ಸಾರ್ವಜನಿಕವಾಗಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಸರ್ಕಾರ ಮುಜುಗುರದಿಂದ ತಪ್ಪಿಸಿಕೊಳ್ಳಲು ಕರಡು ನೀತಿ ಪ್ರತಿಯನ್ನು ಕೋರ್ಟ್‌ಗೆ ನೀಡುತ್ತಿದೆ. ಈ ಮೂಲಕ ನ್ಯಾಯಪೀಠದ ದಿಕ್ಕುತಪ್ಪಿಸುತ್ತಿದೆ’ ಎಂದು ದೂರಿದರು. ಕರಡು ನಿಯಮಗಳನ್ನು ಪ್ರಶ್ನಿಸಲು ಮೂಲ ಅರ್ಜಿಯಲ್ಲಿ ಮಾರ್ಪಾಡು ಮಾಡಲು ನ್ಯಾಯಪೀಠ ಅರ್ಜಿದಾರರಿಗೆ ಅನುಮತಿ ನೀಡಿದೆ. ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.