ADVERTISEMENT

ಅಕ್ರಮ ಪಬ್‌–ಬಾರ್‌: ಕಾನೂನು ಕ್ರಮಕ್ಕೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 19:45 IST
Last Updated 21 ನವೆಂಬರ್ 2019, 19:45 IST
   

ಬೆಂಗಳೂರು: ಪರವಾನಗಿ ಪಡೆಯದ ಪಬ್ ಮತ್ತು ಬಾರ್‌ಗಳ ವಿರುದ್ಧ ‘ಸಾರ್ವಜನಿಕ ಮನರಂಜನಾ ತಾಣಗಳ (ಬೆಂಗಳೂರು ನಗರ) ನಿಯಂತ್ರಣ ಮತ್ತು ಪರವಾನಗಿ ನಿಯಮ-2005’ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಇಂದಿರಾನಗರ ಪ್ರದೇಶದಲ್ಲಿ 80ಕ್ಕೂ ಅಧಿಕ ಬಾರ್‌ಗಳಿದ್ದು, ಅವುಗಳಿಂದ ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ, ಗುರುವಾರ ಸರ್ಕಾರಕ್ಕೆ ಈ ಆದೇಶ ನೀಡಿತು.

ಅರ್ಜಿದಾರರ ಪರ ವಕೀಲರು ವಾದಿಸಿ, ‘ಸಾರ್ವಜನಿಕ ಮನರಂಜನಾ ತಾಣಗಳ (ಬೆಂಗಳೂರು ನಗರ) ನಿಯಂತ್ರಣ ಮತ್ತು ಪರವಾನಗಿ ನಿಯಮ-2005ರ ನಿಯಮಗಳನ್ನು ಸರ್ಕಾರ ಮತ್ತು ಪೊಲೀಸರು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿಲ್ಲ. ಇದರಿಂದ ಮಧ್ಯರಾತ್ರಿ ಸಮಯದಲ್ಲೂ ಪಬ್ ಹಾಗೂ ಬಾರ್‌ಗಳಲ್ಲಿ ಜೋರಾಗಿ ಸಂಗೀತ ಕೇಳಿ ಬರುತ್ತಿರುತ್ತದೆ. ಇದರಿಂದ ಸುತ್ತಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ’ ಎಂದು ದೂರಿದರು.

ADVERTISEMENT

ಅದನ್ನು ಪರಿಗಣಿಸಿದ ನ್ಯಾಯಪೀಠ, ಪರವಾನಗಿ ಪಡೆಯದ ಪಬ್ ಮತ್ತು ಬಾರ್‌ಗಳ ವಿರುದ್ಧ 2005ರ ನಿಯಮಗಳ ಅಡಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು. ಮುಂದಿನ ವಿಚಾರಣೆ ವೇಳೆ ನಿಯಮ ಜಾರಿಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಶಬ್ದಮಾಲಿನ್ಯ ಮಾಪಕಗಳನ್ನು ಖರೀದಿಸದ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, 233 ಶಬ್ದ ಮಾಲಿನ್ಯ ಉಪಕರಣಗಳನ್ನು ಖರೀದಿಸಲಾಗಿದೆ ಎಂದು ಕಳೆದ ವಿಚಾರಣೆ ವೇಳೆಯೇ ಸರ್ಕಾರ ಹೇಳಿತ್ತು. ಆದರೆ, ವಾಸ್ತವವಾಗಿ ಈವರೆಗೆ ಒಂದು ಉಪಕರಣ ಸಹ ಖರೀದಿಸಿಲ್ಲ. ಆದ್ದರಿಂದ ರಾಜ್ಯಾದ್ಯಂತ ಎಷ್ಟು ಶಬ್ದ ಅಳೆಯುವ ಮಾಪನ ಬೇಕಾಗುತ್ತವೆ ಎಂಬುದನ್ನು ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಲೇ ಅಂದಾಜು ಮಾಡಿ, ಅವುಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.

ಸರ್ಕಾರಿ ವಕೀಲ ವೈ.ಎಚ್.ವಿಜಯ್ ಕುಮಾರ್ ವಾದಿಸಿ, ಹೈಕೋರ್ಟ್‌ನ ಹಿಂದಿನ ಆದೇಶದಂತೆ ರಾಜ್ಯದಲ್ಲಿ ನಿಶ್ಯಬ್ದ ವಲಯಗಳನ್ನು ಘೋಷಣೆ ಮಾಡಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅಧಿಸೂಚನೆ ಪ್ರತಿ ಹಾಗೂ ಸಂಪೂರ್ಣ ವಿವರ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.