ADVERTISEMENT

ಹಣ ಅಕ್ರಮ ವರ್ಗಾವಣೆ; ಜಂಟಿ ಕಾರ್ಯಾಚರಣೆ

ರಾಜ್ಯ ಪೊಲೀಸರಿಗೆ ಜಾರಿ ನಿರ್ದೇಶನಾಲಯ ತರಬೇತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:28 IST
Last Updated 24 ಜನವರಿ 2020, 23:28 IST

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ವ್ಯವಹಾರದ ಮೂಲಕ ಸರ್ಕಾರಕ್ಕೆ ವಂಚಿಸುತ್ತಿರುವರನ್ನು ಪತ್ತೆ ಮಾಡಲು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ.

ಈ ಕುರಿತು ಸಿಐಡಿ ಹಾಗೂ ಜಾರಿ ನಿರ್ದೇಶನಾಲಯದ ಸಹಯೋಗದಲ್ಲಿ ಶುಕ್ರವಾರ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು. ಜಂಟಿ ಕಾರ್ಯಾಚರಣೆ ನಡೆಸಲು ಬೇಕಾದ ಸಿದ್ಧತೆ ಹಾಗೂ ಪರಸ್ಪರ ನೆರವು ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.

ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ‘ಅಕ್ರಮವಾಗಿ ಹಣ ಪಡೆದುಕೊಳ್ಳುತ್ತಿರುವ ಹಲವು ವಂಚಕರು, ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಳ್ಳುತ್ತಿದ್ದಾರೆ. ಇಂಥವರನ್ನು ಪತ್ತೆ ಮಾಡುವ ಸಲುವಾಗಿ ತನಿಖೆ ಕೈಗೊಂಡಾಗ ರಾಜ್ಯ ಪೊಲೀಸರು, ಇ.ಡಿ ಅಧಿಕಾರಿಗಳ ಸಹಾಯ ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಸಿಐಡಿ ಡಿಜಿಪಿ ಪ್ರವೀಣ್ ಸೂದ್‌, ‘ಅಕ್ರಮ ಹಣ ವರ್ಗಾವಣೆ ಹಾಗೂ ವ್ಯವಹಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಸಾಕಷ್ಟು ಅವಕಾಶವಿದೆ. ಅಂತಹವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಬಹುದು. ಜಂಟಿ ಕಾರ್ಯಾಚರಣೆ ನಡೆಸಿದರೆ ತನಿಖೆಯು ಮತ್ತಷ್ಟು ಪರಿಣಾಮಕಾರಿಯಾಗಿರಲಿದೆ’ ಎಂದರು.

ಕಾರ್ಯಾಗಾರದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ಪಾಲ್ಗೊಂಡಿ
ದ್ದರು. ಹಣದ ಮೂಲ ಪತ್ತೆ, ವಿದೇಶಗಳಿಗೆ ಹಣ ವರ್ಗಾವಣೆ ಹಾಗೂ ಹವಾಲಾ ಜಾಲ ಭೇದಿಸುವ ತನಿಖಾ ವಿಧಾನಗಳ ಬಗ್ಗೆ ತಜ್ಞರು ತಿಳಿವಳಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.