ADVERTISEMENT

ಐಎಂಎ ಕಂಪನಿ ವಿರುದ್ಧ 40,600 ಮಂದಿ ದೂರು: ಹೂಡಿಕೆದಾರರಿಗೆ ₹1,547 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
   

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ವಿರುದ್ಧ ಸೋಮವಾರ ಅಂತ್ಯದವರೆಗೆ 40,600 ಹೂಡಿಕೆದಾರರು ದೂರು ನೀಡಿದ್ದು, ಅವರಿಗೆ ₹ 1,547 ಕೋಟಿ ವಂಚನೆಯಾಗಿರುವುದು ಪ‍್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಶಿವಾಜಿನಗರದ ಕಲ್ಯಾಣ ಮಂಟಪವೊಂದರಲ್ಲಿ ತೆರೆದಿರುವ ದೂರು ಸ್ವೀಕಾರ ಕೌಂಟರ್‌ಗಳಿಗೆ ಬರುತ್ತಿರುವ ಹೂಡಿಕೆದಾರರು ಸರದಿಯಲ್ಲಿ ನಿಂತು ದೂರು ನೀಡುತ್ತಿದ್ದಾರೆ. ಸೋಮವಾರ ಒಂದೇ ದಿನದಲ್ಲಿ 2 ಸಾವಿರ ದೂರುಗಳು ದಾಖಲಾಗಿವೆ.

‘ಕಂಪನಿಯಿಂದ ವಂಚನೆಗೀಡಾಗಿದ್ದು ಗೊತ್ತಾದ ದಿನದಿಂದಲೇ ಹೂಡಿಕೆದಾರರು ಕೌಂಟರ್‌ಗೆ ಬಂದು ದೂರು ನೀಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಸಿಬ್ಬಂದಿ ದೂರು ಸ್ವೀಕರಿಸುತ್ತಿದ್ದು, ದೂರು ನೀಡುವವರ ಸಂಖ್ಯೆ ಕಡಿಮೆ ಆಗಿಲ್ಲ’ ಎಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹೇಳಿದರು.

ADVERTISEMENT

‘ರಾಜ್ಯವಷ್ಟೇ ಅಲ್ಲದೆ ಹೊರ ರಾಜ್ಯ ಹಾಗೂ ವಿದೇಶದಲ್ಲಿರುವವರು ನಗರಕ್ಕೆ ಬಂದು ದೂರು ನೀಡುತ್ತಿದ್ದಾರೆ. ಎಲ್ಲರಿಂದಲೂ ದೂರು ಪಡೆಯುತ್ತಿದ್ದೇವೆ. ಮತ್ತಷ್ಟು ದಿನ ಕೌಂಟರ್‌ ತೆರೆದಿರಲಿದೆ. ವಂಚನೆಗೀಡಾದವರು ದೂರು ನೀಡಬಹುದು’ ಎಂದು ಹೇಳಿದರು.

ಎಸ್‌ಐಟಿಗೆ ಹಸ್ತಾಂತರ: ‘ಕಂಪನಿಗೆ ಹಣ ಪಾವತಿ ಮಾಡಿದ ದಾಖಲೆಗಳ ಸಮೇತವಾಗಿ ಹೂಡಿಕೆದಾರರಿಂದ ದೂರು ಪಡೆಯಲಾಗುತ್ತಿದೆ.

ಎಲ್ಲ ಹೂಡಿಕೆದಾರರು ದೂರು ನೀಡುವುದು ಮುಗಿದ ನಂತರ, ಪ್ರತಿಯೊಂದು ದೂರುಗಳನ್ನು ಎಸ್‌ಐಟಿಗೆ ಹಸ್ತಾಂತರ ಮಾಡಲಿದ್ದೇವೆ’ ಎಂದು ಪೊಲೀಸರು ಹೇಳಿದರು.

ಮಳಿಗೆಶೇ 75ರಷ್ಟು ಖಾಲಿ...

ಜಯನಗರದಲ್ಲಿರುವ ‘ಐಎಂಎ ಜ್ಯುವೆಲ್ಸ್‌’ ಮಳಿಗೆ ಶೇ 75ರಷ್ಟು ಖಾಲಿ ಆಗಿದ್ದು, ಬಹುತೇಕ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮನ್ಸೂರ್ ಖಾನ್ ಈ ಹಿಂದೆಯೇ ಸಾಗಣೆ ಮಾಡಿರುವ ಅನುಮಾನ ಎಸ್‌ಐಟಿಗೆ ಬಂದಿದೆ.

ಮಳಿಗೆ ಮೇಲೆ ಸೋಮವಾರ ದಾಳಿ ಮಾಡಿದ್ದ ಎಸ್‌ಐಟಿ ಅಧಿಕಾರಿಗಳಿಗೆ ಶೇ 25ರಷ್ಟು ಚಿನ್ನ, ವಜ್ರದ ಆಭರಣಗಳು ಮಾತ್ರ ಸಿಕ್ಕಿವೆ. ಉಳಿದ ಆಭರಣಗಳನ್ನು ಎಲ್ಲಿಗೆ ಸಾಗಿಸಲಾಗಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

25 ಅಕ್ಕಸಾಲಿಗರ ಬಳಕೆ: ಮಳಿಗೆಯಲ್ಲಿ ಕೈ ಬಳೆ, ನಕ್ಲೇಸ್ ಸೇರಿದಂತೆ ಚಿನ್ನ ಹಾಗೂ ವಜ್ರದ ಹಲವು ಆಭರಣಗಳು ಸಿಕ್ಕಿವೆ. ಅವುಗಳನ್ನು ಪರಿಶೀಲಿಸಿ ತೂಕ ಮಾಡಲು 25 ಅಕ್ಕಸಾಲಿಗರನ್ನು ಎಸ್‌ಐಟಿ ಬಳಸಿಕೊಂಡಿದೆ.

ಸೋಮವಾರ ಮಧ್ಯಾಹ್ನ ಅಕ್ಕಸಾಲಿಗರ ಜೊತೆಗೆ ಮಳಿಗೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು, ಆಭರಣಗಳನ್ನು ಒಂದೆಡೆ ಸೇರಿಸಿ ಅಕ್ಕಸಾಲಿಗರಿಂದ ರಾತ್ರಿಯಿಡಿ ಪರಿಶೀಲನೆ ಮಾಡಿಸಿದರು.

ಎರಡನೇ ಪತ್ನಿ ಮನೆಯಲ್ಲೂ 2 ಕೆ.ಜಿ ಚಿನ್ನ: ಮನ್ಸೂರ್ ಖಾನ್ ಅವರ ಎರಡನೇ ಪತ್ನಿ ವಾಸವಿದ್ದ ಶಿವಾಜಿನಗರದಲ್ಲಿರುವ ಮನೆ ಮೇಲೂ ಎಸ್‌ಐಟಿ ಅಧಿಕಾರಿಗಳು ದಾಳಿ ಮಾಡಿದರು. ಅದೇ ವೇಳೆ 2 ಕೆ.ಜಿ ಚಿನ್ನ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

‘ಮನ್ಸೂರ್ ಖಾನ್‌ ಹಾಗೂ ಆತನ ಬಹುತೇಕ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಏನಾದರೂ ಸುಳಿವು ಸಿಗಬಹುದೆಂಬ ಕಾರಣಕ್ಕೆ ನ್ಯಾಯಾಲಯದ ಅನುಮತಿ ಪಡೆದು ಪತ್ನಿಯರ ಮನೆ ಮೇಲೂ ದಾಳಿ ನಡೆಸಲಾಯಿತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.