ADVERTISEMENT

ಐಎಂಎ: ನ.25ರಿಂದ ಆನ್‌ಲೈನ್‌ ಅರ್ಜಿಗೆ ಅವಕಾಶ

ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 23:23 IST
Last Updated 13 ನವೆಂಬರ್ 2020, 23:23 IST
ಐಎಂಎ
ಐಎಂಎ   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಪ್ರಕರಣದಲ್ಲಿ ವಂಚನೆಗೊಳಗಾಗಿರುವ ಹೂಡಿಕೆದಾರರಿಗೆ ಹಣ ಮರಳಿಸಲು ಸಕ್ಷಮ ಪ್ರಾಧಿಕಾರ ಪ್ರಕ್ರಿಯೆ ಆರಂಭಿಸಿದ್ದು, ನವೆಂಬರ್‌ 25ರಿಂದ ಡಿಸೆಂಬರ್‌ 24ರವರೆಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಐಎಂಎ ಪ್ರಕರಣದ ಸಕ್ಷಮ ಪ್ರಾಧಿಕಾರ ಮತ್ತು ವಿಶೇಷ ಅಧಿಕಾರಿಯಾಗಿರುವ ಹರ್ಷ ಗುಪ್ತ, ‘ಠೇವಣಿದಾರರು ಡಿ.24ರೊಳಗೆ ಅರ್ಜಿ ಸಲ್ಲಿಸಬೇಕು. ಎರಡು ಹಂತದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಮೊದಲ ಹಂತದಲ್ಲಿ ವೈಯಕ್ತಿಕ ವಿವರ, ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಗಳ ವಿವರ ಒದಗಿಸಬೇಕು. ಎರಡನೇ ಹಂತದಲ್ಲಿ ಐಎಂಎನಲ್ಲಿ ಹೂಡಿಕೆ ಮಾಡಿರುವ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಬೇಕು’ ಎಂದರು.

ಹೂಡಿಕೆದಾರರು ಮಧ್ಯವರ್ತಿಗಳ ಬಳಿ ಹೋಗಬಾರದು. ಕರ್ನಾಟಕ ಒನ್‌, ಬೆಂಗಳೂರು ಒನ್‌, ಅಟಲ್‌ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು. ಖುದ್ದಾಗಿ ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

ADVERTISEMENT

₹ 475 ಕೋಟಿ ಆಸ್ತಿ ಲಭ್ಯ: ಐಎಂಎನಲ್ಲಿ ಒಂದು ಲಕ್ಷದಷ್ಟು ಜನರು ₹ 2,900 ಕೋಟಿ ಹೂಡಿಕೆ ಮಾಡಿದ್ದರು. ಈ ಪೈಕಿ ಕಂಪನಿಯು ₹ 1,500 ಕೋಟಿಯಷ್ಟನ್ನು ಲಾಭಾಂಶದ ರೂಪದಲ್ಲಿ ಹೂಡಿಕೆದಾರರಿಗೆ ಹಿಂದಿರುಗಿಸಿದೆ. ₹ 1,400 ಕೋಟಿಯಷ್ಟು ಮೊತ್ತವನ್ನು ಹೂಡಿಕೆ
ದಾರರಿಗೆ ಪಾವತಿಸುವುದು ಬಾಕಿ ಇದೆ ಎಂದು ಹರ್ಷಗುಪ್ತ ತಿಳಿಸಿದರು.

ಐಎಂಎ ಕಂಪನಿಯ ಮುಖ್ಯಸ್ಥ ಮನ್ಸೂರ್‌ ಅಲಿ ಖಾನ್‌ ಮತ್ತು ಹಗರಣದಲ್ಲಿ ಶಾಮೀಲಾಗಿದ್ದ ಖಾಸಗಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳ ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡಿ ಹಣ ಸಂಗ್ರಹಿಸಿ ಠೇವಣಿದಾರರಿಗೆ ಹಿಂದಿರುಗಿಸುವ ಪ್ರಸ್ತಾವವಿದೆ. ಈ ರೀತಿ ₹ 475 ಕೋಟಿ ಮೌಲ್ಯದ ಆಸ್ತಿಗಳನ್ನು ಗುರುತಿಸಲಾಗಿದೆ ಎಂದರು.

ಪ್ರಕರಣದಲ್ಲಿ ಶಾಮೀಲಾಗಿದ್ದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಗ್ರಾಮಲೆಕ್ಕಿಗ ಮತ್ತು ಇನ್ನೊಬ್ಬ ಅಧಿಕಾರಿಯ ಪತ್ನಿಯ ಹೆಸರಿನಲ್ಲಿರುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಪೊಲೀಸ್‌ ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಕುರಿತು ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.

ಅರ್ಜಿ ಸಲ್ಲಿಕೆ ಹೇಗೆ?: ಹೂಡಿಕೆದಾರರು ಐಎಂಎ ಜತೆ ವ್ಯವಹಾರ ನಡೆಸಿದ್ದ ಬ್ಯಾಂಕ್‌ ಖಾತೆ ಸಕ್ರಿಯವಾಗಿದ್ದರೆ ಅದನ್ನೇ ಅಧಿಕೃತ ಎಂದು ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಪರಿಗಣಿಸಲಾಗುವುದು. ಖಾತೆ ನಿಷ್ಕ್ರಿಯವಾಗಿದ್ದರೆ ಅಂತಹ ಹೂಡಿಕೆದಾರರು ಠೇವಣಿ ಪತ್ರ, ಷೇರು ಪ್ರಮಾಣಪತ್ರದಂತಹ ದಾಖಲೆಗಳನ್ನು ಸಲ್ಲಿಸಬೇಕು. ಆಧಾರ್‌ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಐಎಂಎ ದತ್ತಾಂಶದ ಜತೆ ಹೊಂದಾಣಿಕೆ ಮಾಡಿ ಅರ್ಹ ಹೂಡಿಕೆದಾರರನ್ನು ಗುರುತಿಸಲಾಗುವುದು ಎಂದು ಹೇಳಿದರು.

ಹಣ ಹಿಂದಿರುಗಿಸುವ ಪ್ರಕ್ರಿಯೆಗಾಗಿ ಸಕ್ಷಮ ಪ್ರಾಧಿಕಾರವು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 6442116442 ಸಂಖ್ಯೆಯ ಬ್ಯಾಂಕ್‌ ಖಾತೆ ತೆರೆದಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಐಎಫ್‌ಎಸ್‌ಸಿ ಸಂಖ್ಯೆ ಎಚ್‌ಡಿಎಫ್‌ಸಿ0001748 ನಮೂದಿಸಿ ಈ ಖಾತೆಗೆ ₹ 1 ವರ್ಗಾವಣೆ ಮಾಡಬೇಕು. ಆಗ ಲಭಿಸುವ ಯುಪಿಆರ್‌ ಸಂಖ್ಯೆಯನ್ನು ಅರ್ಜಿಯಲ್ಲಿ ಉಲ್ಲೇಖಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.