ADVERTISEMENT

ಐಎಂಎ ಪ್ರಕರಣ: ಸಿಬಿಐಗೆ ಮೂಲ ಸೌಕರ್ಯ ಒದಗಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 3:05 IST
Last Updated 22 ಅಕ್ಟೋಬರ್ 2020, 3:05 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಸಂಸ್ಥೆಗೆ ‘ಕರ್ನಾಟಕ ಹೂಡಿಕೆದಾರರ ಹಿತಾಸಕ್ತಿ ಸಂರಕ್ಷಣಾ (ಕೆಪಿಐಡಿ) ಕಾಯ್ದೆ’ಯಡಿ ಅಗತ್ಯ ಮೂಲಸೌಕರ್ಯ ಒದಗಿಸುವುದನ್ನು ಸರ್ಕಾರ ಮರೆಯಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವೇತನವಲ್ಲದ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಅನುದಾನ ಬಿಡುಗಡೆ ಮತ್ತು ಮೂಲಸೌಕರ್ಯ ಒದಗಿಸಲು ವಿಳಂಬ ಮಾಡಿದರೆ ತನಿಖೆ ಮುಂದುವರಿಸಲು ಸಿಬಿಐಗೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿತು.

‘ವಿಧಿವಿಜ್ಞಾನ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಡೇಟಾ ಸಂಗ್ರಹಿಸಲು ಈಗಾಗಲೇ ಹಣ ಖರ್ಚು ಮಾಡಲಾಗಿದೆ. ಸಿಬಿಐಗೆ ರಾಜ್ಯ ಸರ್ಕಾರ ₹12 ಲಕ್ಷ ಪಾವತಿಸಬೇಕಿದೆ. ಸಿಬಿಐ ಆರು ಅಧಿಕಾರಿಗಳಿಗೆ ಕೋವಿಡ್‌ ದೃಢಪಟ್ಟಿದ್ದು, ಅವರಲ್ಲಿ ಇನ್ನೂ ಇಬ್ಬರು ಕ್ವಾರಂಟೈನ್‌ನಲ್ಲಿ ಇದ್ದಾರೆ’ ಎಂದು ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್ ವಿವರಿಸಿದರು.

ADVERTISEMENT

ತನಿಖೆ ಸ್ಥಿತಿಗತಿಯ ವರದಿಯನ್ನು ಡಿಸೆಂಬರ್ 7ರೊಳಗೆ ಸಲ್ಲಿಸಲು ಸಿಬಿಐಗೆ ಅವಕಾಶ ನೀಡಿದ ಪೀಠ, ‘ಅಗತ್ಯ ಹಣಕಾಸನ್ನು ಸಿಬಿಐಗೆ ಕೂಡಲೇ ಬಿಡುಗಡೆ ಮಾಡಬೇಕು. ಈ ಸಂಬಂಧ ವರದಿಯನ್ನು ನ.2ರೊಳಗೆ ಸಲ್ಲಿಸಬೇಕು’ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.