ADVERTISEMENT

ಐಎಂಎ; ಜಪ್ತಿ ಮಾಡಿದ್ದ ವಸ್ತುಗಳ ಕಳ್ಳತನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 16:57 IST
Last Updated 19 ಜುಲೈ 2021, 16:57 IST

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಸುದ್ದಿಯಾಗಿದ್ದ ‘ಐ–ಮಾನಿಟರಿ ಅಡ್ವೈಸರಿ (ಐಎಂಎ)’ ಕಂಪನಿಯ ಆಸ್ಪತ್ರೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದ್ದು, ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನದ ಬಗ್ಗೆ ಐಎಂಎ ಸಕ್ಷಮ ಪ್ರಾಧಿಕಾರದ ಅಧಿಕಾರಿ ನಾಗರಾಜ್ ದೂರು ನೀಡಿದ್ದಾರೆ.

‘ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದನ್ವಯ ಐಎಂಎ ಕಂಪನಿಗೆ ಸೇರಿದ ಶಿವಾಜಿನಗರದಲ್ಲಿರುವ ‘ಫ್ರಂಟ್‌ಲೈನ್ ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆಯನ್ನು ಜಪ್ತಿ ಮಾಡಲಾಗಿತ್ತು. ಕಟ್ಟಡದಲ್ಲಿರುವ ಎಲ್ಲ ವಸ್ತುಗಳನ್ನೂ ಜಪ್ತಿ ಮಾಡಿ ಮಾಡಿ ದಾಖಲಿಸಿಕೊಳ್ಳಲಾಗಿತ್ತು. ಅವುಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಬೇಕಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ವಸ್ತುಗಳ ಪರಿಶೀಲನೆಗಾಗಿ ಸಿಬ್ಬಂದಿ ಜೊತೆಯಲ್ಲಿ ನಾಗರಾಜ್ ಅವರು ಕಟ್ಟಡಕ್ಕೆ ಬಂದಿದ್ದರು. ಬೆಲೆಬಾಳುವ ವಸ್ತುಗಳು ಕಳ್ಳತನ ಆಗಿದ್ದು ಗಮನಕ್ಕೆ ಬಂದಿದೆ’ ಎಂದೂ ಮೂಲಗಳು ತಿಳಿಸಿವೆ.

‘ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಕೆಲ ಕಿಟಕಿಗಳ ಕಬ್ಬಿಣದ ರಾಡ್‌ಗಳನ್ನು ಮುರಿದಿರುವುದು ಕಂಡುಬಂದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.