ADVERTISEMENT

ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಿ: ಪುರುಷೋತ್ತಮ ಬಿಳಿಮಲೆ ಆಗ್ರಹ

‘ತ್ರಿಭಾಷಾ ನೀತಿ ಸಾಕು-ಎರಡು ನುಡಿ ಕಲಿಕೆ ಬೇಕು’ ವಿಚಾರ ಸಂಕಿರಣದಲ್ಲಿ ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 16:18 IST
Last Updated 9 ಆಗಸ್ಟ್ 2025, 16:18 IST
<div class="paragraphs"><p>ಪುರುಷೋತ್ತಮ ಬಿಳಿಮಲೆ&nbsp;</p></div>

ಪುರುಷೋತ್ತಮ ಬಿಳಿಮಲೆ 

   

ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡಿ ದ್ವಿಭಾಷಾ ನೀತಿಯನ್ನು ಚಾಲ್ತಿಗೆ ತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.

ಬನವಾಸಿ ಬಳಗ ಶನಿವಾರ ಏರ್ಪಡಿಸಿದ್ದ ‘ತ್ರಿಭಾಷಾ ನೀತಿ ಸಾಕು-ಎರಡು ನುಡಿ ಕಲಿಕೆ ಬೇಕು’ ಕಿರುಹೊತ್ತಿಗೆ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿ ಇನ್ನೂ ನಮ್ಮ ಕೈಗೆ ಬಂದಿಲ್ಲ. ಅದನ್ನು ಓದುವುದಕ್ಕೂ ಮೊದಲೇ ತೆಗೆದು ಮೂಲೆಗೆ ಹಾಕಬೇಕು ಎಂದು ಮಾತನಾಡಿದರೆ ಅದರ ನಷ್ಟ ನಮಗೆ. ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಹೀಗೆ ಮಾಡಿದರೆ ಸರ್ಕಾರ ಸುಲಭವಾಗಿ ತೆಗೆದು ಬಿಡುತ್ತದೆ. ಹಾಗೇನಾದರೂ  ಆದರೆ ಇನ್ನೊಂದು ಶಿಕ್ಷಣ ನೀತಿ ರೂಪಿಸಲು ಕನಿಷ್ಠ 25 ವರ್ಷ ಬೇಕು ಎಂದು ತಿಳಿಸಿದರು.

‘ಸದ್ಯ ನಮ್ಮ ಮುಂದೆ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ರಾಜ್ಯ ಶಿಕ್ಷಣ ನೀತಿಗಳಿವೆ. ಎರಡು ನೀತಿಗಳಿಂದಾಗಿ ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಗೊಂದಲ ಪರಿಹಾರವಾಗುವಂತೆ ಮಾಡಬೇಕು. ಕೇಂದ್ರ ಸರ್ಕಾರ 1968ರಿಂದ ಇಲ್ಲಿಯವರೆಗೂ ತ್ರಿಭಾಷಾ ಸೂತ್ರದ ವಿಶ್ಲೇಷಣೆಯನ್ನು ನೀಡಿಲ್ಲ. ಅದನ್ನು ಕೇಳುವುದು ನಮ್ಮ ಹಕ್ಕು. ತ್ರಿಭಾಷಾದಿಂದ ಯಾರಿಗೆ ಏನು ಲಾಭ ಆಗಿದೆ? ರಾಜ್ಯಕ್ಕೆ ಆದ ನಷ್ಟ, ಲಾಭಗಳ ಬಗ್ಗೆ ಪಟ್ಟಿಯನ್ನು ಕೊಡಬೇಕು. ಕನ್ನಡದವರು ತ್ರಿಭಾಷಾವನ್ನು ಅಳವಡಿಸಿಕೊಂಡು ಬಂದಿರುವುದರಿಂದ ಇದೀಗ, ರಾಜ್ಯಕ್ಕೆ ಮಾತೃಭಾಷೆಯೇ ಇಲ್ಲದ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕವನ್ನು ಸಶಕ್ತ ಹಾಗೂ ಸಮಗ್ರವಾದ ಪ್ರಗತಿಪರ ರಾಜ್ಯವನ್ನು ಕಟ್ಟಬೇಕಾದಲ್ಲಿ ರಾಜ್ಯ ಭಾಷೆಯನ್ನು ಕಲಿಯಬೇಕು. ರಾಜ್ಯ ಶಿಕ್ಷಣ ನೀತಿಯಲ್ಲಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಅನಗತ್ಯವಾದ ಉದ್ವೇಗವನ್ನು ತೋರಿಸುವ ಅವಶ್ಯಕತೆ ಇಲ್ಲ. ಕನ್ನಡದ ವಿವೇಕ ಮುಸುಕಾಗದೇ ಉಳಿಯಬೇಕೆಂದರೆ, ಬೇರೆ ಭಾಷೆಗಳ ಆಕ್ರಮಣವನ್ನು ತಡೆಯಲೇಬೇಕು ಎಂದು ಹೇಳಿದರು.

ಸಾಹಿತಿ ಹಂ.ಪ. ನಾಗರಾಜಯ್ಯ, ಬನವಾಸಿ ಬಳಗದ ಆನಂದ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.