ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ಯುವಕನೊಬ್ಬ ಅವರನ್ನು ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿ, ಎದೆಯ ಭಾಗವನ್ನು ಮುಟ್ಟಿ ಪರಾರಿಯಾಗಿರುವ ಘಟನೆ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏಪ್ರಿಲ್ 3ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್‌ಗೌಡ ಅವರ ದೂರು ಆಧರಿಸಿ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಗಾಗಿ ಶೋಧ ಕಾರ್ಯ
ನಡೆಸುತ್ತಿದ್ದಾರೆ.
ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ರಾತ್ರಿ 1.52ರ ವೇಳೆ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡ ಬಂದ ಯುವಕ, ಏಕಾಏಕಿ ಒಬ್ಬ ಯುವತಿಯನ್ನು ಎಳೆದಾಡಿ, ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಅವರ ಎದೆಯ ಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಯುವತಿಯರು ಜೋರಾಗಿ ಕಿರುಚಿಕೊಂಡಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಸಂತ್ರಸ್ತ ಯುವತಿಯರು ದೂರು ನೀಡಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯದೊಂದಿಗೆ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.