ADVERTISEMENT

ಎಂಇಐ ಆವರಣದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:31 IST
Last Updated 26 ಮೇ 2025, 16:31 IST
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕವನ್ನು ಸಚಿವ ಕೆ.ಜಿ.ಜಾರ್ಜ್ ಉದ್ಘಾಟಿಸಿದರು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕವನ್ನು ಸಚಿವ ಕೆ.ಜಿ.ಜಾರ್ಜ್ ಉದ್ಘಾಟಿಸಿದರು.   

ರಾಜರಾಜೇಶ್ವರಿನಗರ: ರಾಜ್ಯದಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಬೇಡಿಕೆ ಹೆಚ್ಚಿದ್ದು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್ ಲಿ.(ಎಂಇಐ) ಮತ್ತು ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಸಂಸ್ಥೆಗಳು ಬೇಡಿಕೆಯನ್ನು ಪೂರೈಸಲಿವೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಎಂಇಐ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ಪರಿವರ್ತಕಗಳ ದುರಸ್ತಿ ಘಟಕ ಉದ್ಘಾಟಿಸಿ ಮತ್ತು ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಮಾತನಾಡಿದರು

‘ಹೊಸ ಹೊಸ ಯೋಜನೆಗಳ ಕೈಗೊಳ್ಳುವ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ವಿದ್ಯುತ್ ಪರಿವರ್ತಕಗಳ  ದುರಸ್ತಿಗಾಗಿ ಹೊಸ ಘಟಕ ಉದ್ಘಾಟನೆಯಾಗಿದೆ. ಕಾರ್ಮಿಕರು ಸಂಸ್ಥೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆಗಳು ಲಾಭದಾಯಕ ಸ್ಥಿತಿಯಲ್ಲಿವೆ’ ಎಂದರು.

ADVERTISEMENT

’ಮಳೆಯಿಂದ ವಿದ್ಯುತ್ ಪರಿಕರಗಳಿಗೆ ಎಷ್ಟೇ ಸಮಸ್ಯೆಯಾದರೂ ಅದನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಎಂಇಐ ಅಧ್ಯಕ್ಷ ಎಸ್.ಮನೋಹರ್ ಮಾತನಾಡಿ, ‘ಸಂಸ್ಥೆ ಈ ವರ್ಷ ₹ 24ಕೋಟಿ ಲಾಭದಲ್ಲಿದೆ. ಸಂಸ್ಥೆಯಲ್ಲಿಯೇ ವಿದ್ಯುತ್ ಪರಿವರ್ತಕಗಳ ದುರಸ್ತಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಂಇಐ ವತಿಯಿಂದಲೇ ಚಿತ್ರದುರ್ಗ, ಮೈಸೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ‌ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ’ ಎಂದರು.

‘ಕವಿಕಾ ಮತ್ತು ಎಂಇಐ ಸಂಸ್ಥೆಗಳು ರಾಜ್ಯಕ್ಕೆ ಅಗತ್ಯವಿರುವಷ್ಟು ಪರಿವರ್ತಕಗಳನ್ನು ನೀಡಲು ಸಿದ್ದವಿವೆ. ಖಾಸಗಿಯವರಿಗೆ ಗುತ್ತಿಗೆ ನೀಡುವುದನ್ನು ನಿಲ್ಲಿಸಿದರೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಉಳಿತಾಯವಾಗಲಿದೆ’ ಎಂದರು.

ಇಂದನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿದೇರ್ಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್.ಎನ್, ಎಂಇಐ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.