ADVERTISEMENT

ಐಟಿ ಪಾಲಾಗಿದ್ದ ₹450 ಕೋಟಿ ಹಿಂಪಡೆಯಲು ನೇಮಿಸಿದ್ದ ಸಲಹೆಗಾರಿಗೆ ₹35 ಕೋಟಿ ಶುಲ್ಕ!

ಅಂತಿಮ ತೀರ್ಪು ಹೊರಬೀಳುವುದಕ್ಕೆ 4 ತಿಂಗಳ ಮೊದಲೇ ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 2:09 IST
Last Updated 25 ಜೂನ್ 2019, 2:09 IST
   

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಪಾಲಾಗಿದ್ದ ₹ 450 ಕೋಟಿ ವಾಪಸ್ ಪಡೆಯಲುವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನೇಮಕ ಮಾಡಿದ್ದ ತೆರಿಗೆ ಸಲಹೆಗಾರರು ವಿಧಿಸಿದ ₹ 35 ಕೋಟಿ ಶುಲ್ಕದಿಂದ ವಿಶ್ವವಿದ್ಯಾಲಯ ಬೆಚ್ಚಿ ಬಿದ್ದಿದೆ.

ವಿಟಿಯುಗೆ ಸೇರಿದ ₹450 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದುಆದಾಯ ತೆರಿಗೆ ಇಲಾಖೆಯ ಮೇಲ್ಮನವಿ ನ್ಯಾಯಮಂಡಳಿಯು 2018ರ ಜೂನ್‌ 14ರಂದು ಆದೇಶಿ ಸಿತ್ತು. ಆದರೆ2018ರ ಜನವರಿ 18ರಂದೇ ಐಟಿ ಸಲಹಾ ಶುಲ್ಕವನ್ನು₹35 ಕೋಟಿಗೆ ವಿ.ವಿ ಹೆಚ್ಚಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ‘ಪ್ರಜಾವಾಣಿ’ಗೆ ದೊರೆತಿದೆ.

ಅಂದಿನ ಕುಲಸಚಿವರು ಶುಲ್ಕ ಹೆಚ್ಚಳ ಪ್ರಸ್ತಾವ ತಿರಸ್ಕರಿಸಿದ್ದರು. ಕುಲಪತಿ ಜತೆ ಚರ್ಚಿಸಿಯೇ ಶುಲ್ಕ ಹೆಚ್ಚಳ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತೆರಿಗೆ ಸಲಹೆಗಾರರೂ ಆಗಿದ್ದ ಆದಾಯ ತೆರಿಗೆ ಇಲಾಖೆ ಮಾಜಿ ಕಮಿಷನರ್‌ ಸಮರ್ಥಿಸಿಕೊಂಡಿದ್ದರು. ಈ ಶುಲ್ಕ ಹೆಚ್ಚಳದಿಂದ ವಿಟಿಯು ಕಾರ್ಯನಿರ್ವಾಹಕ ಮಂಡಳಿಯು ಆಘಾತಗೊಂಡಿತ್ತು. ಮಂಡಳಿಯ ಸಭೆ ಮುಂದೆ ಕುಲಪತಿ ಶುಲ್ಕ ಹೆಚ್ಚಳ ಪ್ರಸ್ತಾವ ವಿಚಾರ ಮಂಡಿಸಲಿಲ್ಲ ಎಂದು ಹೇಳಿತ್ತು.

ADVERTISEMENT

‘ವಿಟಿಯುವಿನಲ್ಲಿಕಾರ್ಯನಿರ್ವಾಹಕ ಮಂಡಳಿಗೆ ಪರಮಾಧಿಕಾರ. ತೆರಿಗೆ ಸಲಹೆಗಾರರನ್ನು ನೇಮಿಸಲು ಮಂಡಳಿಯೇ ನಿರ್ಧರಿಸಿದ್ದರೂ ತೆರಿಗೆ ಸಲಹೆಗಾರ
ಮತ್ತು ಕುಲಪತಿ ನಡುವೆ ಆಗಿದ್ದ ಒಪ್ಪಂದದ ಬಗ್ಗೆ ಮಂಡಳಿಗೆ ಗೊತ್ತೇ ಇರಲಿಲ್ಲ’ ಎಂದು ಮಂಡಳಿ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ತೆರಿಗೆ ಸಲಹೆಗಾರರು ಮತ್ತು ವಿಶ್ವವಿದ್ಯಾಲಯ ನಡುವೆ ಹಲವಾರು ಬಾರಿ ಸಂವಹನ ನಡೆದ ಬಳಿಕವೂ ಮಂಡಳಿಯನ್ನು ಕತ್ತಲೆಯಲ್ಲಿ ಇಟ್ಟದ್ದು ಏಕೆ. ಈಗಲಾದರೂ ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಸಮಿತಿಯ ಸದಸ್ಯ ಡಾ.ಸಂಜೀವ್‌ ಕುಬಕಡ್ಡಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕುಲಪತಿ ಡಾ.ಕರಿಸಿದ್ದಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಹಿನ್ನೆಲೆ: ವಿಟಿಯು ಬಳಿ ಇದ್ದ ₹ 500 ಕೋಟಿ ಮೂಲಧನವನ್ನುಬೆಳಗಾವಿಯ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿತ್ತು. ಇದಕ್ಕೆ ಬಡ್ಡಿ ರೂಪದಲ್ಲಿ ವಿಟಿಯುಗೆ ಆದಾಯವೂ ಬರುತ್ತಿದೆ ಎಂದು ವಾದ ಮಂಡಿಸಿದ ಆದಾಯ ತೆರಿಗೆ ಇಲಾಖೆಯು ತೆರಿಗೆ ಮತ್ತು ದಂಡ ಸೇರಿ ₹ 450 ಕೋಟಿಯನ್ನು ಕೆಲವು ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡಿತ್ತು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಆದಾಯ ತೆರಿಗೆ ಇಲಾಖೆ ಪರವಾಗಿ ತೀರ್ಪು ಬಂದಿತ್ತು. ಆದರೆ ತೆರಿಗೆ ಇಲಾಖೆಯ ಬೆಂಗಳೂರಿನ ಮೇಲ್ಮನವಿ ನ್ಯಾಯಮಂಡಳಿಯು ವಿಟಿಯು ಪರವಾಗಿ ತೀರ್ಪು ನೀಡಿದ್ದು, ₹ 450 ಕೋಟಿ ಹಣವೂ ವಿಶ್ವವಿದ್ಯಾಲಯಕ್ಕೆ ಮರಳಿ ದೊರಕುವಂತಾಗಿದೆ.

ತೆರಿಗೆ ಸಲಹೆಗಾಗಿ ವಿಧಿಸಿದ ಶುಲ್ಕ

* ಅಪೀಲು ಸಿದ್ಧಪಡಿಸಲು ಮತ್ತು ಸಲ್ಲಿಸಲು– ₹ 5 ಕೋಟಿ

* ಸಂಶೋಧನೆ ಮತ್ತು ದಾಖಲೆಗಳ ಹಾಜರಾತಿಗೆ– ₹ 12 ಕೋಟಿ

* ಸಭೆ ನಡೆಸಲು, ಸಮ್ಮೇಳನದಲ್ಲಿ ಭಾಗವಹಿಸಲು– ₹ 2 ಕೋಟಿ

* ನ್ಯಾಯಮಂಡಳಿಯಲ್ಲಿ ಲಿಖಿತಅಹವಾಲು ಸಲ್ಲಿಕೆಗೆ – ₹ 10 ಕೋಟಿ

* ನ್ಯಾಯಮಂಡಳಿಮುಂದೆ ಹಾಜರಾಗಿ ವಾದ ಮಂಡಿಸಲು– ₹ 4 ಕೋಟಿ

* ಐಟಿ ಕಮಿಷನರ್ ಮುಂದೆ ಹಾಜರಾಗಿ ವಾದ ಮಂಡಿಸಲು– ₹ 2 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.