ADVERTISEMENT

ತೆರವಾಗದ ಅತಿಕ್ರಮಣ; ಪರಿಹಾರ ನೀಡದ ಇಲಾಖೆ: ಪುಟ್ಟೇನಹಳ್ಳಿ ಕೆರೆ ಒತ್ತುವರಿ ಹೆಚ್ಚಳ

ಆರ್. ಮಂಜುನಾಥ್
Published 26 ಮೇ 2025, 23:31 IST
Last Updated 26 ಮೇ 2025, 23:31 IST
<div class="paragraphs"><p>ಪುಟ್ಟೇನಹಳ್ಳಿ ಕೆರೆ ಆವರಣದಲ್ಲಿರುವ ಒತ್ತುವರಿ</p></div>

ಪುಟ್ಟೇನಹಳ್ಳಿ ಕೆರೆ ಆವರಣದಲ್ಲಿರುವ ಒತ್ತುವರಿ

   

ಬೆಂಗಳೂರು: ಪುಟ್ಟೇನಹಳ್ಳಿ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡವರಿಗೆ ‌ಪುನರ್ವಸತಿ ಕಲ್ಪಿಸಲು ಕಂದಾಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ದಿನೇದಿನೇ ಕೆರೆಯಲ್ಲಿ ಒತ್ತುವರಿ ಪ್ರಮಾಣ ಹೆಚ್ಚಾಗುತ್ತಿದೆ.

ಕೆರೆ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಜಮೀನು ನೀಡಿ, ಮೂಲಸೌಕರ್ಯ ಕಲ್ಪಿಸಲು ಬಿಬಿಎಂಪಿ ಹಣ ಒದಗಿಸಿ ದಶಕವೇ ಕಳೆದರೂ ಪುನರ್ವಸತಿ ಸೌಲಭ್ಯ ಕಲ್ಪಿಸಿಲ್ಲ. ಪುನರ್ವಸತಿ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು, ಅದನ್ನು ಒದಗಿಸದೇ ತೆರವು ಕಾರ್ಯಾಚರಣೆ ಕೈಗೊಳ್ಳಬಾರದು ಎಂದು ನ್ಯಾಯಾಲಯ ಎರಡು ಬಾರಿ ಆದೇಶಿಸಿದ್ದರೂ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ADVERTISEMENT

ಒತ್ತುವರಿದಾರರಿಗೆ ಪುನರ್ವಸತಿ ವಿಳಂಬವಾಗುತ್ತಿರುವ ಸಂದರ್ಭದಲ್ಲೇ ಪುಟ್ಟೇನಹಳ್ಳಿ ಕೆರೆ ಒತ್ತುವರಿದಾರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೆರೆ ಯನ್ನು ಉತ್ತಮವಾಗಿ ಅಭಿವೃದ್ಧಿ ಮಾಡ ಲಾಗಿದ್ದು, ಶುಚಿತ್ವ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುಟ್ಟೇನಹಳ್ಳಿ ಕೆರೆಯ ಒತ್ತುವರಿಯನ್ನು 75 ದಿನಗಳಲ್ಲಿ ತೆರವು ಮಾಡಲಾಗುತ್ತದೆ ಎಂದು ಹೈಕೋರ್ಟ್‌ಗೆ 2023ರ ಸೆಪ್ಟೆಂಬರ್‌ ನಲ್ಲಿ ಬಿಬಿಎಂಪಿ ‘ಕ್ರಿಯಾಯೋಜನೆ’ ಸಲ್ಲಿಸಿತ್ತು. ಒಂದೂವರೆ ವರ್ಷವಾದರೂ ಯಾವುದೇ ಕ್ರಮವಾಗಿಲ್ಲ.

‘ಬೆಟ್ಟದಾಸಪುರದಲ್ಲಿ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸುವವರೆಗೆ ಒತ್ತುವರಿ ತೆರವು ಮಾಡಬಾರದು ಎಂದು ಹೈಕೋರ್ಟ್‌ 2015ರಲ್ಲಿ ಆದೇಶ ನೀಡಿದೆ’ ಎಂಬ ಷರಾ ಬರೆದು ಬಿಬಿಎಂಪಿ ಅಧಿಕಾರಿಗಳು ಕಡತ ಮುಚ್ಚಿದ್ದಾರೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಕಟ್ಟಡ ನಿರ್ಮಿಸಲು ಹಣ ನೀಡಲಾಗಿದೆ ಎಂದೂ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ದಶಕ ಕಳೆದರೂ ಒತ್ತುವರಿ ತೆರವಿಗೆ, ಪುನರ್ವಸತಿ ಕಲ್ಪಿಸಲು ಬಿಬಿಎಂಪಿ, ಕಂದಾಯ ಇಲಾಖೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಮುಂದಾಗಿಲ್ಲ.

ಜೆ.ಪಿ. ನಗರ 7ನೇ ಹಂತದಲ್ಲಿರುವ ಪುಟ್ಟೇನಹಳ್ಳಿ ಕೆರೆಯನ್ನು ‘ಪುಟ್ಟೇನಹಳ್ಳಿ ನೈಬರ್‌ಹುಡ್‌ ಲೇಕ್‌ ಇಂಪ್ರೂವ್‌ಮೆಂಟ್‌ ಟ್ರಸ್ಟ್‌’ ಸಹಯೋಗದಲ್ಲಿ ಬಿಬಿಎಂಪಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ದಶಕದ ಹಿಂದೆಯೇ ಅಭಿವೃದ್ಧಿ ಮಾಡಿದೆ. ಟ್ರಸ್ಟ್‌ ಕೆರೆಯ ರಕ್ಷಣೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಸ್ವಚ್ಛತೆ ಹಾಗೂ ಹಸಿರೀಕರಣ ಹೆಚ್ಚಿಸುವ ಕಾಯಕದಲ್ಲಿ 2008ರಿಂದಲೂ ತೊಡಗಿದೆ. ಇದೆಲ್ಲದರ ಫಲವಾಗಿ ಇಂದು ಪುಟ್ಟೇನಹಳ್ಳಿ ಕೆರೆಯಲ್ಲಿ ಸುಮಾರು 122 ಪ್ರಭೇದದ ಪಕ್ಷಿಗಳನ್ನು ಕಾಣಬಹುದಾಗಿದೆ.

ಜೆ.ಪಿ. ನಗರ 7ನೇ ಹಂತದ ‘ರೆಸಿಡೆಂಟ್ಸ್‌ ಇನ್‌ ದ ವಿಸಿನಿಟಿ ಆಫ್‌ ಪುಟ್ಟೇನಹಳ್ಳಿ ಲೇಕ್‌’ ಎಂಬ ವೇದಿಕೆಯಡಿ ಪುಟ್ಟೇನಹಳ್ಳಿ ಕೆರೆ ಸಮೀಪದ 1,000ಕ್ಕೂ ಹೆಚ್ಚು ನಿವಾಸಿ ಗಳು ಸಹಿ ಮಾಡಿದ ಮನವಿ ಪತ್ರವನ್ನು ಸ್ಥಳೀಯ ಶಾಸಕ ಎಂ. ಸತೀಶ್‌ ರೆಡ್ಡಿ ಅವರಿಗೆ ನೀಡಲಾಗಿದೆ. ಈ ಪತ್ರವನ್ನು ಉಲ್ಲೇಖಿಸಿ ಸತೀಶ್‌ ರೆಡ್ಡಿ ಅವರು ಜಿಲ್ಲಾಧಿಕಾರಿಗೆ 2024ರ ನವೆಂಬರ್‌ನಲ್ಲಿ ಪತ್ರ ಬರೆದಿದ್ದಾರೆ. ಆದರೆ ಪುನರ್ವಸತಿ ಕಲ್ಪಿಸುವಲ್ಲಿ, ಒತ್ತುವರಿ ತೆರವುಗೊಳಿಸುವಲ್ಲಿ ಯಾರೂ ಆಸಕ್ತಿ ವಹಿಸಿಲ್ಲ.

ಪುಟ್ಟೇನಹಳ್ಳಿ ಕೆರೆಯ ನೋಟ

ಜಮೀನು ನೀಡಲಾಗಿದೆ: ಡಿಸಿ

‘ಪುಟ್ಟೇನಹಳ್ಳಿ ಕೆರೆ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸಲು ಬೆಟ್ಟದಾಸಪುರದಲ್ಲಿ 2.5 ಎಕರೆ ಸರ್ಕಾರಿ ಜಮೀನನ್ನು ಒದಗಿಸಲಾಗಿದೆ. ಅಲ್ಲಿ ಮೂಲಸೌಕರ್ಯ ಸೇರಿದಂತೆ ಕಟ್ಟಡ, ಮನೆ ನಿರ್ಮಿಸುವುದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುವುದಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಪತ್ರ: ಬೆಟ್ಟದಾಸಪುರದಲ್ಲಿ ಪುನರ್ವಸತಿ ಕಲ್ಪಿಸಲು ‘ರಾಜೀವ್‌ಗಾಂಧಿ ವಸತಿ ನಿಗಮ’ಕ್ಕೆ ಭೂಮಿ ಹಸ್ತಾಂತರಿ ಸಲಾಗಿದೆ. ಲೋಕಾಯುಕ್ತ ಹಾಗೂ ಹೈಕೋರ್ಟ್‌ ನಿರ್ದೇಶನ ನೀಡಲಾಗಿದ್ದು, ಈ ಬಗ್ಗೆ ಆಗಿರುವ ಕಾರ್ಯಪ್ರಗತಿಯ ವರದಿಯನ್ನು ಈವರೆಗೂ ನೀಡಿಲ್ಲ. ಕೂಡಲೇ ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಯವರು ‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮದ’ ಆಯುಕ್ತರಿಗೆ 2023ರ ಸೆ.19ರಂದು ಪತ್ರ ಬರೆದಿದ್ದಾರೆ. ಆದರೂ ಯಾವುದೇ ಪ್ರಗತಿಯಾಗಿಲ್ಲ.

ಹಸಿರು– ಜಲಸಿರಿಯೊಂದಿಗೆ ಪುಟ್ಟೇನಹಳ್ಳಿ ಕೆರೆ

ಕ್ರಮ ಕೈಗೊಳ್ಳದ ಇಲಾಖೆಗಳು: ಉಷಾ

‘ಪುಟ್ಟೇನಹಳ್ಳಿ ಕೆರೆ ಅಂಗಳದಲ್ಲಿ ಹತ್ತಾರು ವರ್ಷಗಳಿಂದ ಒತ್ತುವರಿ ಉಳಿದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಎಂ. ಸತೀಶ್‌ ರೆಡ್ಡಿ ಅವರಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸಿ, ನಂತರ ಅವರನ್ನು ತೆರವು ಮಾಡಬೇಕು ಎಂದು ನ್ಯಾಯಾಲಯ ಎರಡು ಬಾರಿ ಆದೇಶ ನೀಡಿದ್ದರೂ, ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ, ಒಬ್ಬರು ಮತ್ತೊಬ್ಬರನ್ನು ತೋರಿಸುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಕ್ರಮ ಕೈಗೊಳ್ಳದ್ದರಿಂದ ಮುಖ್ಯ ಕಾರ್ಯದರ್ಶಿಯವರು ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಕೆರೆಯನ್ನು ಸ್ವಚ್ಛವಾಗಿ ಉಳಿಸಿಕೊಳ್ಳಬಹುದು’ ಎಂದು ಪುಟ್ಟೇನಹಳ್ಳಿ ನೈಬರ್‌ಹುಡ್‌ ಲೇಕ್‌ ಇಂಪ್ರೂವ್‌ಮೆಂಟ್‌ ಟ್ರಸ್ಟ್‌ನ ಅಧ್ಯಕ್ಷೆ ಉಷಾ ರಾಜಗೋಪಾಲನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.