ADVERTISEMENT

ಸಿಂಥೆಟಿಕ್‌ ಡ್ರಗ್ಸ್‌ ಹಾವಳಿ ಹೆಚ್ಚಳ: ‘5,049 ಎಲ್‌ಎಸ್‌ಡಿ ಸ್ಟ್ರಿಪ್‌ ವಶ’

ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 20:21 IST
Last Updated 8 ಡಿಸೆಂಬರ್ 2020, 20:21 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   
""

ಬೆಂಗಳೂರು: ‘ರಾಜ್ಯದಲ್ಲಿ ಈ ವರ್ಷ 5,049 ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು (ಮಾದಕ ವಸ್ತುವಿನ ಕಾಗದದ ಚೂರುಗಳು) ವಶಪಡಿಸಿಕೊಳ್ಳಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಈಶ್ವರ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಅವರು, ‘ಇತ್ತೀಚಿನ ದಿನಗಳಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ಹಾವಳಿ ಹೆಚ್ಚಾಗಿದೆ. ಈ ಎಲ್‌ಎಸ್‌ಡಿ ಸ್ಟ್ರಿಪ್‌ಗಳು 1–1.15 ಮಿ.ಮೀ. ಇರುತ್ತವೆ. ಕಳೆದ ವರ್ಷ 155 ಎಲ್‌ಎಸ್‌ಡಿ ಸ್ಟ್ರಿಪ್‌ಗಳನ್ನು ವಶಪಡಿಸಿಕೊಂಡಿದ್ದೆವು. ‍ನಾವು ಡ್ರಗ್ಸ್‌ ವಿರುದ್ಧ ಸಮರವನ್ನೇ ಸಾರಿದ್ದು, ಬೃಹತ್ ಪ್ರಮಾಣದಲ್ಲಿ ಸ್ಟ್ರಿಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ಎನ್‌ಡಿಪಿಎಸ್‌ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಈಶ್ವರ ಖಂಡ್ರೆ ಗಮನ ಸೆಳೆದರು. ಸಚಿವರು ಉತ್ತರಿಸಿ, ’ವಿಧಿವಿಜ್ಞಾನ ಪ್ರಯೋಗಾಲಯಗಳ (ಎಫ್‌ಎಸ್‌ಎಲ್‌) ಕೊರತೆಯಿಂದಾಗಿ ಚಾರ್ಜ್‌ಶೀಟ್‌ ಸಲ್ಲಿಕೆ ವಿಳಂಬವಾಗುತ್ತಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಅತ್ಯಾಧುನಿಕ ಪ್ರಯೋಗಾಲಯ ಆರಂಭಿಸಲಾಗಿದೆ. ಆರು ತಿಂಗಳಲ್ಲಿ ರಾಜ್ಯದ ಆರು ಕಡೆಗಳಲ್ಲಿ ಪ್ರಯೋಗಾಲಯ ಆರಂಭಿಸಲಾಗುವುದು’ ಎಂದರು.

ADVERTISEMENT

‘ಈ ಹಿಂದೆ ಮಾದರಿಗಳ ಪರೀಕ್ಷೆ ವಿಳಂಬವಾಗುತ್ತಿತ್ತು. 20 ಮಾದರಿಗಳನ್ನು ಕಳುಹಿಸಿದರೆ ಒಂದೊಂದೇ ಮಾದರಿಗಳನ್ನು ಪರೀಕ್ಷೆ ಮಾಡುತ್ತಿದ್ದರು. ಹೊಸದಾಗಿ ಆರಂಭಿಸಿರುವ ಪ್ರಯೋಗಾಲಯದಲ್ಲಿ ಏಕಕಾಲಕ್ಕೆ 51 ಮಾದರಿಗಳ ತಪಾಸಣೆ ನಡೆಸಬಹುದು’ ಎಂದರು.

ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ’ಕಲಬುರ್ಗಿ ಜಿಲ್ಲೆಯಲ್ಲಿ ಪೊಲೀಸರೇ ನಾಲ್ಕು ರಿಕ್ರಿಯೇಷನ್‌ ಕ್ಲಬ್‌ಗಳಿಗೆ ಅನುಮತಿ ನೀಡಿದ್ದಾರೆ‘ ಎಂದು ದೂರಿದರು. ’ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ಅನುಮತಿಗಳನ್ನು ನೀಡಲಾಗಿದೆ‘ ಎಂದು ಸಚಿವರು ಸಮಜಾಯಿಷಿ ನೀಡಿದರು.

ಬೀದರ್‌ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರೇ ಗಾಂಜಾ ಉತ್ಪಾದನೆ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಭರವಸೆ ನೀಡಿದರು.

ಮೈಸೂರಿನಲ್ಲಿ ಹುಕ್ಕಾ ಕೇಂದ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಜೆಪಿಯ ಎಲ್‌. ನಾಗೇಂದ್ರ ಗಮನ ಸೆಳೆದರು. ’ಹುಬ್ಬಳ್ಳಿಯಲ್ಲಿ ಶಾಲೆಗಳ ಹತ್ತಿರ ಗಾಂಜಾ ಮಾರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ‘ ಎಂದು ಕಾಂಗ್ರೆಸ್‌ನ ಪ್ರಸಾದ್‌ ಅಬ್ಬಯ್ಯ ದೂರಿದರು.

’ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರ್ಕಾರ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದೆ. ಗೃಹ ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‘ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.