ADVERTISEMENT

ವಾಯುಮಾಲಿನ್ಯದಿಂದ ಹೃದಯಾಘಾತ ಹೆಚ್ಚಳ

ತೊಂದರೆಗೊಳಗಾಗುವವರಲ್ಲಿ ಯುವಜನರೇ ಹೆಚ್ಚು l ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ ವರದಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:54 IST
Last Updated 27 ಸೆಪ್ಟೆಂಬರ್ 2019, 19:54 IST
ತೇಜಸ್ವಿ ಸೂರ್ಯ ಮತ್ತು ಡಾ.ಸಿ.ಎನ್‌. ಮಂಜುನಾಥ್ ಚರ್ಚಿಸಿದರು. ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹಾಗೂ ಶಾಸಕಿ ಸೌಮ್ಯಾ ರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ
ತೇಜಸ್ವಿ ಸೂರ್ಯ ಮತ್ತು ಡಾ.ಸಿ.ಎನ್‌. ಮಂಜುನಾಥ್ ಚರ್ಚಿಸಿದರು. ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹಾಗೂ ಶಾಸಕಿ ಸೌಮ್ಯಾ ರೆಡ್ಡಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಾವುದೇ ಕಾಯಿಲೆ ಹಾಗೂ ವ್ಯಸನ ಇಲ್ಲದಿದ್ದರೂ ಕಿರಿಯ ವಯಸ್ಸಿನಲ್ಲೇ ಹೃದಯಾಘಾತ ಕಾಣಿಸಿಕೊಳ್ಳಲು ವಾಯುಮಾಲಿನ್ಯವೇ ಪ್ರಮುಖ ಕಾರಣ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಶೋಧನಾ ವರದಿ ತಿಳಿಸಿದೆ.

‘ವಿಶ್ವ ಹೃದಯ ದಿನ’ದ ಅಂಗವಾಗಿ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ
ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ‘ಯುವ ಭಾರತೀಯರಲ್ಲಿ ಹೃದಯಾಘಾತ’ ಎಂಬ ವರದಿ ಬಿಡುಗಡೆ ಮಾಡಿದರು.

ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಮಾತನಾಡಿ, ‘ಬದಲಾದ ಜೀವನಶೈಲಿಯಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಎರಡು ವರ್ಷಗಳಲ್ಲಿ 20ರಿಂದ 40 ವರ್ಷದೊಳಗಿನ 2,400 ಹೃದ್ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಅವರಲ್ಲಿ ಬಹುತೇಕರಿಗೆ ಮಧುಮೇಹ, ರಕ್ತದೊತ್ತಡ ಸೇರಿದಂತೆ ಯಾವುದೇ ಕಾಯಿಲೆಗಳೂ ಇದ್ದಿರಲಿಲ್ಲ. ಅದೇ ರೀತಿ, ಮದ್ಯಪಾನ, ಧೂಮಪಾನದಂತಹ ವ್ಯಸನ ಹೊಂದಿರದಿದ್ದರೂ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ’ ಎಂದರು.

ADVERTISEMENT

ಚಾಲಕರಲ್ಲಿ ಹೆಚ್ಚುತ್ತಿದೆ ಸಮಸ್ಯೆ:

‘ಅಮೆರಿಕದ ಹಾರ್ಟ್‌ ಅಸೋಸಿಯೇಷನ್ ಪ್ರಕಾರ ವಾಯುಮಾಲಿನ್ಯದಿಂದ ಹೆಚ್ಚು ಜನರು ಸಾಯುತ್ತಿದ್ದಾರೆ. ವಾಹನ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ವಾಯುಮಾಲಿನ್ಯದಿಂದ ಹೃದಯ ಸಮಸ್ಯೆ ಎದುರಿಸುತ್ತಿರುವುದು ನಾವು ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ರಕ್ತ ಪರೀಕ್ಷೆ ವೇಳೆಹಿಮೋಗ್ಲೋಬಿನ್ ಅಂಶ ಜಾಸ್ತಿಯಿರುವುದು ಪತ್ತೆಯಾಯಿತು.ದೇಹದಲ್ಲಿಹಿಮೋಗ್ಲೋಬಿನ್ ಅಂಶ ಜಾಸ್ತಿ ಇದ್ದರೂ ಅಪಾಯ. ಬೆಂಗಳೂರಿನಂತಹ ಮಹಾನಗರದ ಸಂಚಾರ ಸಿಗ್ನಲ್‌ಗಳಲ್ಲಿ 5 ನಿಮಿಷ ನಿಂತರೆ 5 ಸಿಗರೇಟ್‌ ಸೇದಿದಷ್ಟು ಮಾಲಿನ್ಯ ದೇಹ ಸೇರಲಿದೆ’ ಎಂದರು.

‘ವಾಯುಮಾಲಿನ್ಯದಿಂದಲೇ ಅಫ್ಗಾನಿಸ್ತಾನದಲ್ಲಿ 1 ಲಕ್ಷ ಜನರಲ್ಲಿ 4 ಸಾವಿರ ಮಂದಿ ಸಾಯುತ್ತಿದ್ದಾರೆ. ನಮ್ಮ ದೇಶದಲ್ಲಿ 200 ಮಂದಿ ಮರಣ ಹೊಂದುತ್ತಿದ್ದಾರೆ. ಅಮೆರಿಕ, ಜಪಾನ್‌ನಲ್ಲಿ ಕೇವಲ 20 ಮಂದಿ ಸಾಯುತ್ತಿದ್ದಾರೆ. ವಾಯುಮಾಲಿನ್ಯದ ಜತೆಗೆ ವಂಶವಾಹಿ ಕಾರಣಗಳು ಕೂಡಾ ಹೃದಯಾಘಾತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಧ್ಯಯನ ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.

ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ನಗರದಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಸಿಗರೇಟ್‌ ನಿಷೇಧ ಮಾಡಿದಲ್ಲಿ ಶೇ 50ರಷ್ಟು ಹೃದಯಾಘಾತ ಪ್ರಕರಣ ನಿಲ್ಲಲಿದೆ’ ಎಂದು ತಿಳಿಸಿದರು.

***

ಈ ಹಿಂದೆಸಂಸತ್ತು ಅಧಿವೇಶನದಲ್ಲಿ ಇ ಸಿಗರೇಟ್ ನಿಷೇಧಕ್ಕೆ ಒತ್ತಾಯಿಸಿದ್ದೆ.ಮುಂದಿನ ಅಧಿವೇಶನದಲ್ಲಿ ಎಲ್ಲ ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸುವೆ
–ತೇಜಸ್ವಿ ಸೂರ್ಯ, ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.