ADVERTISEMENT

Independence Day: ‘ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 18:51 IST
Last Updated 15 ಆಗಸ್ಟ್ 2025, 18:51 IST
<div class="paragraphs"><p>ಹೇರೊಹಳ್ಳಿಯ ಬಿಬಿಎಂಪಿ ಸಂಯುಕ್ತ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರ ಸಮೂಹ ನೃತ್ಯ ಪ್ರಸ್ತುತಪಡಿಸಿದರು</p></div>

ಹೇರೊಹಳ್ಳಿಯ ಬಿಬಿಎಂಪಿ ಸಂಯುಕ್ತ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರ ಸಮೂಹ ನೃತ್ಯ ಪ್ರಸ್ತುತಪಡಿಸಿದರು

   

 ಚಿತ್ರ:ಪ್ರಶಾಂತ್ ಎಚ್.ಜಿ.

ಬೆಂಗಳೂರು: ಪೊಲೀಸ್‌ ಬ್ಯಾಂಡ್‌ಗಳ ಕನ್ನಡ, ಹಿಂದಿಯ ದೇಶಭಕ್ತಿ ಗೀತೆಗಳ ಇಂಪು, 694 ಮಕ್ಕಳು ವೀರ ಮಹಿಳೆಯರ ರೂಪದಲ್ಲಿ ಹೆಜ್ಜೆ, ರಮಣಶ್ರೀ ಅಂಧರ ಶಾಲೆ ವಿದ್ಯಾರ್ಥಿಗಳ ನೃತ್ಯ, ಕರ್ನಾಟಕ ಜೊತೆಗೆ ಗೋವಾ ಪೊಲೀಸ್‌ ಪಡೆ ಪಥ ಸಂಚಲನಗಳು ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಹೆಚ್ಚಿಸಿದವು.

ADVERTISEMENT

79ನೇ ಸ್ವಾತಂತ್ರೋತ್ಸವ ಅಂಗವಾಗಿ ಬಿಬಿಎಂಪಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಪಥ ಸಂಚಲನ ಜನರನ್ನು ಆಕರ್ಷಿಸಿದವು. ಅಂಗವಿಕಲ ಹಾಗೂ ಅಂಧ ಮಕ್ಕಳು ಪಥಸಂಚಲನಕ್ಕೆ ಕಳೆ ತಂದರು. ಶ್ವಾನದಳದ ‘ವಿಶೇಷ ನಡಿಗೆ’ ಗಮನ ಸೆಳೆಯಿತು. ಭಾಗವಹಿಸಿದ್ದ ವಿದೇಶಿಯರು, ವಿವಿಧ ಕಲಾಪ್ರದರ್ಶನಗಳನ್ನು ಕಂಡು ಸಂತಸಗೊಂಡರು.

30 ನಿಮಿಷ ನಡೆದ ಪಥ ಸಂಚಲನದಲ್ಲಿ 36 ತಂಡಗಳು ಭಾಗಿಯಾಗಿದ್ದವು. ಬಿಎಸ್‌ಎಫ್‌, ಕೆಎಸ್‌ಆರ್‌ಪಿ, ಗೋವಾ ಪೊಲೀಸ್‌, ಮೀಸಲು ಕಡೆ, ಕರ್ನಾಟಕ ಕೈಗಾರಿಕಾ ಭದ್ರತೆ ಪಡೆ, ಸಂಚಾರ ವಿಭಾಗ, ಸಿವಿಲ್‌ ಡಿಫೆನ್ಸ್‌, ಎನ್‌ಸಿಸಿ, ಸ್ಕೌಟ್ಸ್‌, ಸೇವಾದಳ, ಶ್ವಾನದಳ, ಅಗ್ನಿಶಾಮಕ, ಅಬಕಾರಿ, ಗೃಹರಕ್ಷಕ ದಳದ ತಂಡಗಳು ಹೆಜ್ಜೆ ಹಾಕಿದವು. ತಂಡದ ನಾಯಕರ ನೇತೃತ್ವದಲ್ಲಿ ಮುಂದೆ ಸಾಗಿದ ಪಡೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್ ಶ್ವಾನ ದಳ ಪಥಸಂಚಲನ

ಬೆಂಗಳೂರು ಮಿತ್ರ ಅಕಾಡೆಮಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಕೋರಮಂಗಲ ಪೊಲೀಸ್‌ ಪಬ್ಲಿಕ್‌ ಶಾಲೆ, ಯಶವಂತಪುರ ಬಾಪು ಪ್ರೌಢಶಾಲೆ, ಕಾರ್ಮೆಲ್‌ ಮಾಡೆಲ್‌ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಸಮರ್ಥನಂ ಶಾಲೆಯ ಅಂಗವಿಕಲ ಮಕ್ಕಳು ಕೂಡ ಹೆಜ್ಜೆ ಹಾಕಿ ದೇಶ ಪ್ರೇಮ ಮೆರೆದರು. ರಮಣಶ್ರೀ ಅಂಧರ ಶಾಲೆ ವಿದ್ಯಾರ್ಥಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ವಿವಿಧ ವಿಭಾಗಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಗೋವಾ ಪೊಲೀಸ್‌ ತಂಡಕ್ಕೂ ಬಹುಮಾನ ಲಭಿಸಿತು.

ವೀರ ಕನ್ನಡತಿಯರು: ಬಿಬಿಎಂಪಿ ರೂಪಿಸಿದ್ದ ‘ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರು’ ಎನ್ನುವ ನೃತ್ಯ ರೂಪಕವೂ ಗಮನ ಸೆಳೆಯಿತು. 694 ಮಕ್ಕಳು ವಿವಿಧ ವೀರ ಮಹಿಳೆಯರ ರೂಪದಲ್ಲಿ ಹೆಜ್ಜೆ ಹಾಕಿದರು. ರಾಣಿ ಅಬ್ಬಕ್ಕದೇವಿಯಿಂದ ಆರಂಭಗೊಂಡು ಕಿತ್ತೂರು ರಾಣಿ ಚನ್ನಮ್ಮ, //ಬೆಳವಣಿಗೆ ಮಲ್ಲಮ್ಮ,// ಒನಕೆ ಓಬವ್ವ, ಬಳ್ಳಾರಿ ಸಿದ್ದಮ್ಮ ಸಹಿತ ಹಲವರ ಶೌರ್ಯ ಹಾಗೂ ತ್ಯಾಗವನ್ನು ಸ್ಮರಿಸಲಾಯಿತು.

ಮಿತ್ರ ಅಕಾಡೆಮಿಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ


ಪೊಲೀಸ್‌ ಬ್ಯಾಂಡ್‌: ಮೂರನೇ ಕಾರ್ಯಕ್ರಮವಾಗಿ ವಿವಿಧ ಪೊಲೀಸ್‌ ಬ್ಯಾಂಡ್‌ಗಳು ನಾಡು ಹಾಗೂ ದೇಶಭಕ್ತಿ ಹಿನ್ನೆಲೆಯ ಹಾಡುಗಳನ್ನು ಪ್ರಸ್ತುತಪಡಿಸಿದವು. ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಎನ್ನುವ ಗೀತೆಯೊಂದಿಗೆ ಆರಂಭಗೊಂಡು, ‘ಇದೇ ನಾಡು ಇದೇ ಭಾಷೆ..’, ‘ಜೋಗದ ಸಿರಿ ಬೆಳಕಿನಲ್ಲಿ..’ ಹಾಡುಗಳು, ವೈಷ್ಣವ ಜನತೋ, ರಘುಪತಿ ರಾಘವ ರಾಜಾರಾಂ ಗೀತೆಗಳನ್ನು ಸಂಗೀತಗಾರರು ಪ್ರಸ್ತುತಪಡಿಸಿದರು. ‘ಸಾರೆ ಜಹಾಂ ಸೇ ಅಚ್ಛಾ..’ ಗೀತೆಯೊಂದಿಗೆ ಪಥ ಸಂಚಲನಕ್ಕೆ ತೆರೆ ಬಿತ್ತು.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್‌ನ ಪ್ರದರ್ಶನ


ಗ್ಯಾರಂಟಿ ನೃತ್ಯ
ಸ್ವಾತಂತ್ರ್ಯೋತ್ಸವದಲ್ಲಿ ‘ಗ್ಯಾರಂಟಿ ನೃತ್ಯ’ ವಿಶೇಷವಾಗಿತ್ತು. ಗ್ಯಾರಂಟಿ ಯೋಜನೆಗಳನ್ನು ಮುಖ್ಯವಾಗಿಟ್ಟುಕೊಂಡು ‘ಹೋಯಿತು ಅಂಧಕಾರ ಉಚಿತ ಸಂಚಾರ ಒಳ್ಳೆಯ ಆಹಾರವು 78ನೇ ವರ್ಷಕ್ಕೆ ಮನೆ ಮನೆಗೂ ಸ್ವಾತಂತ್ರ್ಯವೂ’ ಎನ್ನುವ ಗೀತೆಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಒಟ್ಟು 450 ಮಕ್ಕಳು ಕೇಸರಿ ಬಿಳಿ ಹಸಿರು ಉಡುಗೆಯೊಂದಿಗೆ ಯೋಜನೆಯನ್ನು ಜನರ ಮುಂದೆ ಬಿಡಿಸಿಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮೆಚ್ಚುಗೆಗೂ ಪಾತ್ರವಾಯಿತು.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.