ADVERTISEMENT

ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 16:01 IST
Last Updated 5 ಜುಲೈ 2025, 16:01 IST
<div class="paragraphs"><p>ಐಐಟಿ ಮದ್ರಾಸ್ ಹಳೆ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ‘ಸಂಗಮ್’ ಸಮಾವೇಶದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಾತನಾಡಿದರು. </p></div>

ಐಐಟಿ ಮದ್ರಾಸ್ ಹಳೆ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ‘ಸಂಗಮ್’ ಸಮಾವೇಶದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಾತನಾಡಿದರು.

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ಭಾರತವು ಗಡುವಿನ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಸ್ಪಷ್ಟಪಡಿಸಿದರು.

ADVERTISEMENT

ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಜುಲೈ 9ರ ಗಡುವು ನೀಡಿರುವುದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಕಾಂಗ್ರೆಸ್ ಮತ್ತು ಯುಪಿಎ ಅವಧಿಯ ದುರ್ಬಲ ಭಾರತವಲ್ಲ. ಯುಪಿಎ ಅವಧಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿರದ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿತ್ತು’ ಎಂದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಐಟಿಎಂಎ ಸಂಗಮ-2025 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಸ್ಟ್ರೇಲಿಯಾ, ಮಾರಿಷಸ್, ಯುಎಇ ಮತ್ತು ಇತರೆ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಕಳೆದ ತಿಂಗಳು ಬ್ರಿಟನ್ ಜತೆಯೂ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಜಗತ್ತಿನ ಯಾವುದೇ ದೇಶದ ಜತೆ ಸ್ಪರ್ಧಿಸುವ ಆತ್ಮವಿಶ್ವಾಸ ಇದೆ’ ಎಂದರು.

‘ಈಗ ಯಾರೂ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಸಹ ಭ್ರಷ್ಟಾಚಾರ ಮತ್ತು ಒಳಜಗಳದ ತಾಣವಾಗಿದೆ. ರಾಹುಲ್ ಗಾಂಧಿ ತಮ್ಮ ಸರ್ಕಾರವನ್ನು ನಿಯಂತ್ರಣ ಮಾಡಲಿ’ ಎಂದು ಒತ್ತಾಯಿಸಿದರು.

‘ದೇಶದ ಜನರು ಕಾಂಗ್ರೆಸ್‌ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದು, ಮೂರು ಬಾರಿ ಆ ಪಕ್ಷವನ್ನು‌ ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ ನಕಾರಾತ್ಮಕ ಮನಸ್ಥಿತಿ ಹೊಂದಿದ್ದಾರೆ. ಈಗಲೂ ಕಾಂಗ್ರೆಸ್ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಸಕಾರಾತ್ಮಕ ಚಿಂತನೆ ಹೊಂದಿಲ್ಲ’ ಎಂದು ಗೋಯಲ್ ಟೀಕಿಸಿದರು.

‘ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿ ದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಭಾರತ ಕೂಡ ಒಂದು. ಎಲ್ಲಾ ದೇಶಗಳು ನಮ್ಮೊಂದಿಗೆ ವ್ಯಾಪಾರ ಒಪ್ಪಂದಕ್ಕೆ  ಉತ್ಸುಕವಾಗಿವೆ. ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತೊಡಕಾಗುತ್ತಿದೆ. ಖರ್ಗೆ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಇವರ ನಕಾರಾತ್ಮಕ ರಾಜಕಾರಣದಿಂದಲೇ ಅವರನ್ನು ದೇಶದ ಜನರು ಮೂರು ಬಾರಿ ತಿರಸ್ಕರಿಸಿದ್ದಾರೆ’ ಎಂದು  ಕುಟುಕಿದರು.

500ಕ್ಕೂ ಹೆಚ್ಚು ಮಂದಿ ಭಾಗಿ
ನಗರದಲ್ಲಿ ಶನಿವಾರ ನಡೆದ ಐಐಟಿ ಮದ್ರಾಸ್‌ ಮತ್ತು ಐಐಟಿಎಂ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಮ್ಮೇಳನ ‘ಸಂಗಮ್‌ 2025’ ದಲ್ಲಿ ಹಳೆಯ ವಿದ್ಯಾರ್ಥಿಗಳು ಅಧ್ಯಾಪಕರು ಉದ್ಯಮಿಗಳು ಹೂಡಿಕೆದಾರರು ಸೇರಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆವಿಷ್ಕಾರ ಮತ್ತು ಉದ್ಯಮಶೀಲತೆ ಬಗ್ಗೆ ಕೇಂದ್ರ ಸಚಿವ ಪೀಯೂಷ್ ಗೋಯಲ್ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ.ವಿ.ಕಾಮಕೋಟಿ ಐಐಟಿಎಂಎಎ ಅಧ್ಯಕ್ಷೆ ಶ್ಯಾಮಲಾ ರಾಜರಾಮ್ ಐಐಟಿ ಮದ್ರಾಸ್‌ ಡೀನ್ ಪ್ರೊ.ಅಶ್ವಿನ್‌ ಮಹಾಲಿಂಗಂ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.