ADVERTISEMENT

‘ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ’

ಚುನಾವಣೆ ವೇಳೆ ಆರೋಪ ಅಚ್ಚರಿ ತಂದಿದೆ: ಮೇಯರ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 19:52 IST
Last Updated 18 ಮಾರ್ಚ್ 2019, 19:52 IST
   

ಬೆಂಗಳೂರು: ‘ಇಂದಿರಾ ಕ್ಯಾಂಟೀನ್‌ದಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಈ ಆಹಾರದಲ್ಲಿ ವಿಷಕಾರಿ ಅಂಶಗಳಿದ್ದು, ಇದರ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಆತಂಕ ಇದೆ’ ಎಂದು ಗೋವಿಂದರಾಜನಗರ ವಾರ್ಡ್‌ನ ಪಾಲಿಕೆ ಸದಸ್ಯ ಕೆ. ಉಮೇಶ್ ಶೆಟ್ಟಿ ಗಂಭೀರ ಆರೋಪ ಮಾಡಿದರು.

ಆರೋಪಕ್ಕೆ ಪ್ರತಿಕ್ರಿಯಿಸಿರುವ ಮೇಯರ್‌ ಗಂಗಾಂಬಿಕೆ, ‘ಇಂದಿರಾ ಕ್ಯಾಂಟೀನ್‌ ಆರಂಭವಾಗಿ ಒಂದೂವರೆ ವರ್ಷ ಕಳೆದಿದೆ. ಆಹಾರವನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ಬಳಿಕವೇ ಕ್ಯಾಂಟೀನ್‌ಗಳಿಗೆ ಪೂರೈಸಲಾಗುತ್ತಿದೆ. ಇದುವರೆಗೆ ಯಾರೂ ಈ ರೀತಿ ದೂರಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ದಿಢೀರ್‌ ಇಂತಹ ಆರೋಪ ಮಾಡಿರುವುದು ಆಶ್ಚರ್ಯ ತಂದಿದೆ’ ಎಂದು ಹೇಳಿದ್ದಾರೆ.

ವೈದ್ಯ ಶಿವಪ್ರಕಾಶ್ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ ಶೆಟ್ಟಿ, ‘ಇಂದಿರಾ ಕ್ಯಾಂಟೀನ್ ಆಹಾರವನ್ನು ರಾಮಯ್ಯ ಆಹಾರ ಸಂಶೋಧನಾ ಪ್ರಯೋಗಾಲಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಪರೀಕ್ಷಿಸಿದ್ದೇವೆ. ಇದು ಸೇವನೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ. ಇದನ್ನು ಸೇವಿಸಿದವರಿಗೆ ವಾಂತಿ, ಭೇದಿ ಮತ್ತು ಮಿದುಳು ಸಂಬಂಧಿ ಕಾಯಿಲೆ ಮತ್ತು ಕಡಿಮೆ ರಕ್ತದೊತ್ತಡದಂತಹ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ’ ಎಂದರು.

ADVERTISEMENT

ತಪ್ಪು ಲೆಕ್ಕ: ‘ಪ್ರತಿ ಕ್ಯಾಂಟೀನ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಊಟ, ತಿಂಡಿ ಸೇವನೆ ಮಾಡುತ್ತಾರೆ ಎಂದು ಸುಳ್ಳು ಲೆಕ್ಕ ನೀಡಲಾಗುತ್ತಿದೆ. ಆದರೆ, ವಾಸ್ತವವಾಗಿ ಕ್ಯಾಂಟೀನ್‌ಗೆ ದಿನದಲ್ಲಿ 200 ಜನರೂ ಬರುವುದಿಲ್ಲ’ ಎಂದು ಆರೋಪ ಮಾಡಿದರು.

‘ಕ್ಯಾಂಟೀನ್‌ಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಶುಚಿತ್ವವನ್ನೂ ಕಾಪಾಡುತ್ತಿಲ್ಲ. ಕ್ಯಾಂಟೀನ್‌ನಲ್ಲಿ ಬಿಕರಿಯಾಗದೇ ಉಳಿದ ಆಹಾರವನ್ನು ಪೌರಕಾರ್ಮಿಕರಿಗೆ ನೀಡಲಾಗುತ್ತಿದೆ’ ಎಂದೂ ದೂರಿದರು.

ಪರಿಶೀಲನೆಗೆ ಕ್ರಮ: ‘ಪಾಲಿಕೆ ಆಯುಕ್ತರೂ ಸೇರಿದಂತೆ ಹಿರಿಯ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ಗೆ ಆಗಾಗ ದೀಢೀರ್‌ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸುತ್ತಿದ್ದಾರೆ. ಪಾಲಿಕೆ ಕೌನ್ಸಿಲ್‌ ಸಭೆ ನಡೆಸುವಾಗ ಸದಸ್ಯರಿಗೂ ಇಂದಿರಾ ಕ್ಯಾಂಟೀನ್‌ನ ಆಹಾರವನ್ನೇ ಪೂರೈಸುತ್ತಿದ್ದೇವೆ. ಇದುವರೆಗೆ ಎಲ್ಲೂ ಈ ಕ್ಯಾಂಟೀನ್‌ ಆಹಾರದಿಂದಾಗಿ ಸಮಸ್ಯೆ ಕಾಣಿಸಿಕೊಂಡಿಲ್ಲ. ಸಾರ್ವಜನಿಕರಿಂದಲೂ ನಮಗೆ ಒಂದೂ ದೂರು ಬಂದಿಲ್ಲ’ ಎಂದು ಮೇಯರ್‌ ತಿಳಿಸಿದರು.

‘ಎಲ್ಲ ಇಂದಿರಾ ಕ್ಯಾಂಟೀನ್‌ಗಳ ಆಹಾರವನ್ನು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ವೈಜ್ಞಾನಿಕವಾಗಿ ಪರಿಶೀಲನೆಗೆ ಒಳಪಡಿವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರ ವರದಿಯನ್ನೂ ಜನರ ಮುಂದಿಡುತ್ತೇವೆ’ ಎಂದರು.

*ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. 198 ವಾರ್ಡ್‌ನ ಎಲ್ಲ ಕ್ಯಾಂಟೀನ್‌ಗಳಲ್ಲೂ ಆಹಾರದ ಗುಣಮಟ್ಟ ಪರೀಕ್ಷಿಸುವಂತೆಯೂ ನಿರ್ದೇಶನ ನೀಡಿದ್ದೇನೆ
-ಜಿ. ಪರಮೇಶ್ವರ, ಬೆಂಗಳೂರು ಅಭಿವೃದ್ಧಿ‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.