ಬೆಂಗಳೂರು: ಇಲ್ಲಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ (ಐಜಿಐಸಿಎಚ್) ಆವರಣದಲ್ಲಿ ಎಂಟು ಮಹಡಿಗಳ ಸೂಪರ್ ಸ್ಪೆಷಾಲಿಟಿ ಕಟ್ಟಡ ತಲೆಯೆತ್ತಿದೆ. ಈ ಕಟ್ಟಡವು ಮಕ್ಕಳ ಚಿಕಿತ್ಸೆಗೆ ಹಾಸಿಗೆಗಳ ಕೊರತೆಯನ್ನು ನೀಗಿಸುವ ಜತೆಗೆ, ಅಂಗಾಂಗ ಕಸಿ, ಅಸ್ಥಿಮಜ್ಜೆ ಕಸಿಯಂತಹ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಘಟಕಗಳನ್ನು ಒಳಗೊಂಡಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಐಜಿಐಸಿಎಚ್, ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದ ಶಿಫಾರಸು ಆಧಾರದಲ್ಲಿ ಮಕ್ಕಳು ಚಿಕಿತ್ಸೆಗೆ ಬರುತ್ತಾರೆ. ಇಲ್ಲಿಗೆ ಬರುವ ಬಹುತೇಕ ಮಕ್ಕಳು ಒಳರೋಗಿಗಳಾಗಿ ದಾಖಲಾಗುವುದರಿಂದ ಹಾಸಿಗೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದಲೇ 450 ಹಾಸಿಗೆಗಳನ್ನು ಒಳಗೊಂಡ ಎಂಟು ಮಹಡಿಗಳ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡ ಕಾರ್ಯಾರಂಭವಾದ ಬಳಿಕ ಸಂಸ್ಥೆಯಲ್ಲಿ ಒಟ್ಟು ಹಾಸಿಗೆಗಳ ಸಂಖ್ಯೆ 900ಕ್ಕೆ ಏರಿಕೆಯಾಗಲಿದೆ.
ಈ ಕಟ್ಟಡವನ್ನು ಒಟ್ಟು ₹138 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರವು 2019ರಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ, ಕೋವಿಡ್-ಲಾಕ್‌ಡೌನ್‌ನಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಈಗ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಬೆಡ್, ವೈದ್ಯಕೀಯ ಉಪಕರಣಗಳ ಅಳವಡಿಕೆ ಮಾತ್ರ ಬಾಕಿ ಉಳಿದಿವೆ. ಇನ್ನೊಂದು ತಿಂಗಳಲ್ಲಿ ಈ ಕಟ್ಟಡವು ಮಕ್ಕಳ ಸೇವೆಗೆ ತೆರೆದುಕೊಳ್ಳುವ ಸಾಧ್ಯತೆಯಿದೆ.
ಅಂಗಾಂಗ ಕಸಿ: ವಿರಳ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೂ ಸಂಸ್ಥೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಥಲಸ್ಸೇಮಿಯಾ ಪೀಡಿತ ಮಕ್ಕಳೂ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ನೂತನ ಕಟ್ಟಡವು 50 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕವನ್ನೂ ಒಳಗೊಂಡಿದೆ. ಈ ಕಟ್ಟಡದಲ್ಲಿ ಅಂಗಾಂಗ ಕಸಿ ಘಟಕವೂ ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಸರ್ಕಾರಿ ವ್ಯವಸ್ಥೆಯಡಿ ಕಾರ್ಯಾರಂಭಿಸಲಿರುವ ಮಕ್ಕಳ ಪ್ರಥಮ ಕಸಿ ಕೇಂದ್ರವೂ ಇದಾಗಲಿದೆ. ಖಾಸಗಿ ವ್ಯವಸ್ಥೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಸಲಾಗುತ್ತಿರುವ ಅಂಗಾಂಗ ಕಸಿಗಳನ್ನು ಈ ಕಟ್ಟಡದಲ್ಲಿ ಬಿಪಿಎಲ್ ಕುಟುಂಬದ ಮಕ್ಕಳಿಗೆ ಬಹುತೇಕ ಉಚಿತವಾಗಿ ನಡೆಸಲಾಗುತ್ತದೆ.
‘ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ಕಟ್ಟಡಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಅಳವಡಿಕೆಗೆ ಹಾಗೂ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಸಂಸ್ಥೆಯು ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಅನುಮತಿ ದೊರೆತ ಬಳಿಕ ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಸಿಬ್ಬಂದಿ ನೇಮಕಾತಿ ನಡೆಯಲಿದೆ. ಅಂಗಾಂಗ ಕಸಿಯಂತಹ ಪ್ರಕ್ರಿಯೆಗಳಿಗೆ ರೊಬೋಟಿಕ್ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಲಾಗುವುದು’ ಎಂದು ಸಂಸ್ಥೆಯ ವೈದ್ಯಾಧಿಕಾರಿಗಳು ತಿಳಿಸಿದರು.
ಅಂಕಿ–ಅಂಶಗಳು 450 ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿರುವ ಹಾಸಿಗೆಗಳು 500ರಿಂದ 600 ಸಂಸ್ಥೆಗೆ ಪ್ರತಿನಿತ್ಯ ಭೇಟಿ ನೀಡುವ ಹೊರರೋಗಿಗಳು
ಸೂಪರ್ ಸ್ಪೆಷಾಲಿಟಿ ಬ್ಲಾಕ್ ಶೀಘ್ರದಲ್ಲಿಯೇ ಕಾರ್ಯಾರಂಭಿಸಲಿದೆ. ಇಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಾಗಲಿದ್ದು ಇನ್ನಷ್ಟು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಮಕ್ಕಳಿಗೆ ಒದಗಿಸಲು ಸಾಧ್ಯವಾಗುತ್ತದೆಡಾ. ಸಂಜಯ್ ಕೆ.ಎಸ್. ಐಜಿಐಸಿಎಚ್ ನಿರ್ದೇಶಕ
ದುಬಾರಿ ವೆಚ್ಚದ ಅಸ್ಥಿಮಜ್ಜೆ ಕಸಿ ವಾಯುಮಾಲಿನ್ಯ ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಮಕ್ಕಳೂ ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ. ದೃಢಪಟ್ಟ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚಿನವರು ರಕ್ತದ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ. ರಕ್ತದ ಕ್ಯಾನ್ಸರ್ ಎದುರಿಸುತ್ತಿರುವ ಮಕ್ಕಳ ಚೇತರಿಕೆಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ಸಹಕಾರಿ. ಆದ್ದರಿಂದ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಕಟ್ಟಡವು ಅಸ್ಥಿಮಜ್ಜೆ ಕಸಿ ಘಟಕ ಹಾಗೂ ಮಕ್ಕಳ ಆಂಕೊಲಾಜಿ ವಿಭಾಗವನ್ನೂ ಒಳಗೊಂಡಿದೆ. ಖಾಸಗಿ ವ್ಯವಸ್ಥೆಯಡಿ ಅಸ್ಥಿಮಜ್ಜೆ ಕಸಿಗೆ ₹40 ಲಕ್ಷದವರೆಗೂ ವೆಚ್ಚವಾಗಲಿದೆ. ಈ ಕಸಿಯನ್ನು ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿ ಅಸ್ಥಿಮಜ್ಜೆ ಕಸಿ ಪ್ರಕ್ರಿಯೆಯೂ ಯೋಜನೆಯಡಿ ಬಿಪಿಎಲ್ ಕುಟುಂಬದ ಮಕ್ಕಳಿಗೆ ಬಹುತೇಕ ಉಚಿತವಾಗಿ ನಡೆಸಲಾಗುತ್ತದೆ.
ಎಂಟು ಮಹಡಿಗಳಲ್ಲಿ ಏನೆಲ್ಲ ವ್ಯವಸ್ಥೆ? ತಳ ಮಹಡಿ; ದಾಸ್ತಾನು ಹಾಗೂ ವಾಹನ ಪಾರ್ಕಿಂಗ್ ನೆಲ ಮಹಡಿ; ತುರ್ತು ಚಿಕಿತ್ಸೆ ಹೊರ ರೋಗಿ ವಿಭಾಗ 1ನೇ ಮಹಡಿ; ವಿಕಿರಣ ವಿಜ್ಞಾನ ವಿಭಾಗ ಆಡಳಿತಾತ್ಮಕ ಬ್ಲಾಕ್ 23 ಮತ್ತು 4ನೇ ಮಹಡಿ; ಮಕ್ಕಳ ವಾರ್ಡ್ 5ನೇ ಮಹಡಿ; ಮಕ್ಕಳ ತೀವ್ರ ನಿಗಾ ಘಟಕ 6ನೇ ಮಹಡಿ; ಸೇವಾ ವಲಯ 7ನೇ ಮಹಡಿ; ಅಂಗಾಂಗ ಕಸಿ ಘಟಕ 8ನೇ ಮಹಡಿ; ಅಸ್ಥಿಮಜ್ಜೆ (ಬಿಎಂಟಿ) ಕಸಿ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.