ಬೆಂಗಳೂರು: ಇಂದಿರಾನಗರ 100 ಅಡಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ಸಸಿಗಳ ನಿರ್ವಹಣೆ ಜವಾಬ್ದಾರಿಯನ್ನು ವಾಣಿಜ್ಯ ಮಳಿಗೆಗಳಿಗೆ ನೀಡಬೇಕು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
‘ಇದನ್ನು ವೈಟ್ ಟಾಪಿಂಗ್ ರಸ್ತೆಯಾಗಿ ಅಭಿವೃದ್ಧಿಪಡಿಸಿದ್ದು, ಪಾದಚಾರಿ ಮಾರ್ಗದುದ್ದಕ್ಕೂ ತೋಟಗಾರಿಕಾ ವಿಭಾಗದಿಂದ ಸಸಿಗಳನ್ನು ನೆಡಲಾಗಿದೆ. ಆದರೆ, ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎಲ್ಲಾ ಕಡೆ ಒಂದೇ ಮಾದರಿಯಲ್ಲಿ ಕಾಣುವ ಹಾಗೆ ವಿನ್ಯಾಸ ಮಾಡಬೇಕು. ಅದಕ್ಕಾಗಿ ಸ್ಥಳೀಯ ವಾಣಿಜ್ಯ ಉದ್ದಿಮೆಗಳ ಜೊತೆ ಸಭೆ ನಡೆಸಿ ಒಡಂಬಡಿಕೆ ಮಾಡಿಕೊಂಡು ಅವರೇ ನಿರ್ವಹಣೆ ಮಾಡಲು ಕ್ರಮ ವಹಿಸಬೇಕು’ ಎಂದು ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಆದೇಶಿಸಿದರು.
ರಸ್ತೆಬದಿ ಕಸ ಬಿಸಾಡುವ ಉದ್ದಿಮೆ/ ಮಳಿಗಗಳಿಗೆ ದಂಡ ವಿಧಿಸಿ, ಮತ್ತೆ ಕಸ ಬಿಸಾಡದಂತೆ ಎಚ್ಚರಿಕೆ ನೀಡಬೇಕು. ದೊಮ್ಮಲೂರು ಮೇಲ್ಸೇತುವೆ ಬಳಿಯ ಕಸ ವರ್ಗಾವಣೆ ಕೇಂದ್ರ, ಒಣ ತ್ಯಾಜ್ಯ ಸಂಗ್ರಹಣಾ ಘಟಕದ ಬಳಿ ತುಂಬಾ ವಾಸನೆ ಬರುತ್ತಿದ್ದು, ಆ ಪ್ರದೇಶದಲ್ಲಿ ಪ್ರೆಷರ್ ಪಂಪ್ ಮೂಲಕ ಸ್ವಚ್ಛಗೊಳಿಸಿ, ವಾಸನೆ ಬರದಂತೆ ಹಾಗೂ ಸುಂದರವಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಪರಿಶೀಲನೆ ಸಂದರ್ಭದಲ್ಲಿ ಹಾಜರಿದ್ದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ‘ಕೇಂಬ್ರಿಡ್ಜ್ ರಸ್ತೆಯ ಇಸ್ರೊ ಸೇತುವೆ ಬಳಿ ರಾಜಕಾಲುವೆಯ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಜೋಗುಪಾಳ್ಯ, ಒ.ಆರ್.ಸಿ ರಸ್ತೆ ಹಾಗೂ ಅಕ್ಕಿತಿಮ್ಮನಹಳ್ಳಿಯಲ್ಲಿ ಸಮುದಾಯ ಭವನದ ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮರು ಟೆಂಡರ್ ಕರೆದು ತ್ವರಿತವಾಗಿ ಸುಮುದಾಯ ಭವನಗಳನ್ನು ನಿರ್ಮಿಸಿಕೊಡಬೇಕು’ ಎಂದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ಕೆ.ವಿ. ರಾಜೇಂದ್ರ ಅವರು, ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಹಾಗೂ ವಾರ್ಡ್ ಮಟ್ಟದಲ್ಲಿ ಅನಧಿಕೃತ ಜಾಹೀರಾತು ಫಲಕ/ಬ್ಯಾನರ್ ತೆರವುಗೊಳಿಸಲು ಆದೇಶಿಸಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಆಯುಕ್ತ ಕೆ.ಎನ್ ರಮೇಶ್ ಅವರು ಅಧಿಕಾರಿಗಳಿಗೆ ತಿಳಿಸಿದರು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಹೂಳು ತೆರವುಗೊಳಿಸಬೇಕು ಎಂದರು.
3.5 ಟನ್ ಪ್ಲಾಸ್ಟಿಕ್ ವಶ, ₹1.5 ಲಕ್ಷ ದಂಡ
ಬೆಂಗಳೂರು ಉತ್ತರ ನಗರ ಪಾಲಿಕೆ ದಾಸರಹಳ್ಳಿಯ ಭೈರವವೇಶ್ವರ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಗೋದಾಮಿಗೆ ಪಾಲಿಕೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಏಕ ಬಳಕೆಯ 3.5 ಟನ್‌ನಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ₹1.5 ಲಕ್ಷ ದಂಡ ವಿಧಿಸಿದರು. ಏಕ ಬಳಕೆ ಪ್ಲಾಸ್ಟಿಕ್ ಅನ್ನು ಮತ್ತೆ ಬಳಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಉತ್ತರ ನಗರಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ರೈಲ್ವೆ ಸಮಾನಾಂತರ ರಸ್ತೆಯಾದ ಎಂ.ಸಿ.ಇ.ಸಿ.ಎಚ್.ಎಸ್ ಹಂತ-2 ಮೇಸ್ತ್ರಿಪಾಳ್ಯ-ರಾಚೇನಹಳ್ಳಿ ಲಿಂಕ್ ರಸ್ತೆಗಳಲ್ಲಿ ಡಾಂಬರೀಕರಣ ಮತ್ತು ಎರಡೂ ಬದಿಯ ಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಹೇಳಿದರು.
ಮಳೆಯಿಂದ ಆಗುವ ಅನಾಹುತ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇ-ಖಾತಾ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದು ವರ್ಚ್ಯುವಲ್ ಸಭೆ ಮೂಲಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.