ADVERTISEMENT

ಮಕ್ಕಳಾಗದ ದಂಪತಿಯನ್ನು ನೋಡುವ ರೀತಿ ಬದಲಾಗಲಿ: ದಿನೇಶ್ ಗುಂಡೂರಾವ್

ಆಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ ಉದ್ಘಾಟಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 15:43 IST
Last Updated 3 ಸೆಪ್ಟೆಂಬರ್ 2025, 15:43 IST
ಆಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ ಅನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಡಾ. ದೇವಿಕಾ ಗುಣಶೀಲ, ವೈದ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು
ಆಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ ಅನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಡಾ. ದೇವಿಕಾ ಗುಣಶೀಲ, ವೈದ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು   

ಬೆಂಗಳೂರು: ‘ಮಕ್ಕಳಾಗದ ದಂಪತಿಗಳನ್ನು ಸಮಾಜ ನೋಡುವ ರೀತಿ ಬದಲಾಗಬೇಕು. ಆಧುನಿಕ ಚಿಕಿತ್ಸೆಗಳಿಂದ ಬಂಜೆತನ ನಿವಾರಣೆ ಸಾಧ್ಯವಾಗುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. 

ಗುಣಶೀಲ ಆಸ್ಪತ್ರೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ 50 ವರ್ಷಗಳ ಸಾರ್ಥಕ ಸಂಭ್ರಮ’ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹೊಸ ಸ್ವರೂಪ ಮತ್ತು ‘ಆಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್’ ಉದ್ಘಾಟಿಸಿ, ಮಾತನಾಡಿದರು. 

‘ದೇಶದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಂಜೆತನ ನಿವಾರಣೆ ಚಿಕಿತ್ಸೆಗಳು ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗಕ್ಕೂ ತಲುಪುವಂತಾಗಬೇಕು. ನಗರದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾದ ಗುಣಶೀಲ ಆಸ್ಪತ್ರೆಯು ಒಂದು ಕುಟುಂಬದ ಒಡೆತನದಲ್ಲಿ ಮುಂದುವರಿಯುತ್ತಿರುವುದರಿಂದ, ಹೆಚ್ಚಿನ ಕಾಳಜಿ ವಹಿಸಿ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ADVERTISEMENT

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ದೇವಿಕಾ ಗುಣಶೀಲ, ‘50 ವರ್ಷಗಳ ಹಿಂದೆ ನನ್ನ ತಾಯಿ ಡಾ. ಸುಲೋಚನಾ ಗುಣಶೀಲ ಅವರು ಆರಂಭಿಸಿದ ಈ ಆಸ್ಪತ್ರೆ, ಸಾವಿರಾರು ಕುಟುಂಬಗಳ ಭವಿಷ್ಯವನ್ನೇ ಬದಲಿಸಿದೆ. ದಕ್ಷಿಣ ಭಾರತದ ಮೊದಲ ಪ್ರನಾಳ ಶಿಶು ಜನಿಸಿದ್ದು ಕೂಡ ಇದೇ ಆಸ್ಪತ್ರೆಯಲ್ಲಿ. ಬಂಜೆತನ ಹೊಂದಿರುವ ಪ್ರತಿಯೊಂದು ದಂಪತಿಗೂ ಮಗುವನ್ನು ಹೊಂದಲು ಸೂಕ್ತ ಚಿಕಿತ್ಸೆ ನೀಡುತ್ತಾ ಬಂದಿದ್ದೇವೆ’ ಎಂದು ಹೇಳಿದರು. 

‘ಹೊಸದಾಗಿ ಪ್ರಾರಂಭವಾದ ‘ಆಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್’ ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿದೆ. ಮಕ್ಕಳ ದೈಹಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಾಮರ್ಥ್ಯ ಸುಧಾರಿಸುವ ಚಿಕಿತ್ಸೆಗಳನ್ನು ನೀಡಲಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.