ADVERTISEMENT

ಕೋವಿಡ್–19 ಶಂಕಿತನೊಂದಿಗೆ ಇನ್ಫೊಸಿಸ್ ಸಿಬ್ಬಂದಿ ಭೇಟಿ; ಕಚೇರಿ ಖಾಲಿ ಮಾಡಿದ ಕಂಪನಿ

ಏಜೆನ್ಸೀಸ್
Published 14 ಮಾರ್ಚ್ 2020, 10:34 IST
Last Updated 14 ಮಾರ್ಚ್ 2020, 10:34 IST
ಇನ್ಫೊಸಿಸ್‌
ಇನ್ಫೊಸಿಸ್‌   

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ಇನ್ಫೊಸಿಸ್‌ ಸಿಬ್ಬಂದಿಯೊಬ್ಬರು ಸಂಪರ್ಕ ಮಾಡಿರುವುದು ತಿಳಿದು ಬಂದಿದೆ. ಇದರಿಂದಾಗಿ ಬೆಂಗಳೂರಿನ ಇನ್ಫೊಸಿಸ್‌ ಆವರಣದ ಕಚೇರಿ ಕಟ್ಟಡವೊಂದನ್ನು ಖಾಲಿ ಮಾಡಲಾಗಿದೆ.

ಹವಾನಿಯಂತ್ರಿತ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಸಂಸ್ಥೆಯ ಉದ್ಯೋಗಿಗಳು ಕೆಲವು ದಿನಗಳ ವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಕರ್ನಾಟಕ ಸರ್ಕಾರ ಸಲಹೆ ನೀಡಿದೆ. ಇದರ ಬೆನ್ನಲ್ಲೇ ಇನ್ಫೊಸಿಸ್‌ ಎಲೆಕ್ಟ್ರಾನಿಕ್‌ ಸಿಟಿ ಫೇಸ್‌ 11ರ ಆವರಣದಲ್ಲಿರುವ ಕಚೇರಿಯಿಂದ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ.

'ಐಐಪಿಎಂ ಕಟ್ಟಡದಲ್ಲಿ ತಂಡದ ಸದಸ್ಯರೊಬ್ಬರು ಕೋವಿಡ್‌–19 ಶಂಕಿತವ್ಯಕ್ತಿಯೊಂದಿಗೆ ಸಂಪರ್ಕಿಸಿರುವ ಸಾಧ್ಯತೆ ಇರುವುದಾಗಿ ಮಾಹಿತಿ ದೊರೆತಿದೆ'. ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರ ಐಐಪಿಎಂ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ADVERTISEMENT

ಸಿಬ್ಬಂದಿ ಆತಂಕಕ್ಕೆ ಒಳಗಾಗದೆ ಸಮಾಧಾನದಿಂದ ಇರುವಂತೆ ಇನ್ಫೊಸಿಸ್‌ ನಿರ್ವಹಣಾ ಮಂಡಳಿ ಮನವಿ ಮಾಡಿದೆ. ಕಟ್ಟಡ ಖಾಲಿ ಮಾಡಿರುವುದು ಮುನ್ನಚರಿಕೆಯ ಕ್ರಮವಾಗಿದೆ ಎಂದು ತಿಳಿಸಿದೆ. ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೊಂಕು ದೃಢಪಟ್ಟಿರುವ ಆರು ಜನರ ಪೈಕಿ ಮೂವರು ಐಟಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊರೊನಾ ವೈರಸ್‌ ಸೊಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಒಂದು ವಾರ ಶಾಪಿಂಗ್‌ ಮಾಲ್‌, ಚಿತ್ರಮಂದಿರಗಳು, ಬೇಸಿಗೆ ಶಿಬಿರಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ. ಶಾಲಾ–ಕಾಲೇಜುಗಳ ರಜೆ ನೀಡಿದ್ದು, ನಿಗದಿಯಂತೆ ಪರೀಕ್ಷೆಗಳನ್ನು ಮುಂದುವರಿಸಲು ಸೂಚಿಸಿದೆ. ಮದವೆ, ಸಮಾರಂಭಗಳನ್ನು ನಡೆಸದಂತೆಯೂ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.