ADVERTISEMENT

ಬಿಸಿಯೂಟದಲ್ಲಿ ಹುಳು ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 18:45 IST
Last Updated 28 ಅಕ್ಟೋಬರ್ 2019, 18:45 IST
ಬಿಸಿಯೂಟದಲ್ಲಿ ಹುಳು
ಬಿಸಿಯೂಟದಲ್ಲಿ ಹುಳು   

ಕೆ.ಆರ್.ಪುರ: ಇಂದಿರಾ ಕ್ಯಾಂಟೀನ್‌ನಿಂದ ಪ್ರತಿನಿತ್ಯ ಪೌರಕಾರ್ಮಿಕರಿಗೆ ವಿತರಿಸುವ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದ್ದು, ಮೂವರು ಪೌರಕಾರ್ಮಿಕರು ವಾಂತಿ ಮಾಡಿಕೊಂಡಿರುವ ಘಟನೆ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಮಹದೇವಪುರ ವಲಯದ ರಾಮಮೂರ್ತಿನಗರ ವಾರ್ಡ್‌ನ ಪೌರಕಾರ್ಮಿಕರಿಗೆ ವಿತರಿಸಿದ ಬಿಸಿಯೂಟ ಪಲಾವ್‌ನಲ್ಲಿ ಹುಳುಗಳು ಕಂಡುಬಂದಿದ್ದು, ಇದನ್ನು ಕಂಡು ಪೌರಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ. ‍‘ಪಾಲಿಕೆಯವರು ಕಳಪೆ ಗುಣ
ಮಟ್ಟದ ಆಹಾರ ವಿತರಿಸುವ ಮೂಲಕ ನಮ್ಮ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಂದು ವರ್ಷದಿಂದ ನೀಡುತ್ತಿರುವ ಊಟದಲ್ಲಿ‌ ಒಂದಿಲ್ಲೊಂದು ಸಮಸ್ಯೆ ಇರುತ್ತದೆ. ಇಂದಿರಾ ಕ್ಯಾಂಟೀನ್‌ನಿಂದ ಪೌರ ಕಾರ್ಮಿಕರಿಗೆ ದಿನನಿತ್ಯ ಸರಬರಾಜು ಆಗುವ ಊಟ ಸರಿಯಾಗಿ ಬೆಂದಿರುವುದಿಲ್ಲ. ಅದರಲ್ಲಿ ನಿತ್ಯ ಹುಳುಗಳ ದರ್ಶನವಾಗುತ್ತದೆ‌. ಬದನೆಕಾಯಿ, ಮಂಗಳೂರು ಸೌತೆಕಾಯಿ ಬಿಟ್ಟರೆ ಬೇರೆ ತರಕಾರಿ ಕಾಣುವುದಿಲ್ಲ. ಇಂತಹ ಊಟ ನೀಡುವುದಕ್ಕಿಂತ ನಿಲ್ಲಿಸುವುದೇ ಸೂಕ್ತ’ ಎಂದು ಪೌರ ಕಾರ್ಮಿಕ ಗಾದಿಲಿಂಗಪ್ಪ ತಿಳಿಸಿದರು.

ADVERTISEMENT

ಈ ಹಿಂದೆಯೂ ಹಲವು ಬಾರಿ ಊಟದಲ್ಲಿ ಹುಳಗಳು ಕಂಡುಬಂದಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಪೌರಕಾರ್ಮಿಕರಾದ ಮಂಜುಳಾ ಅಳಲು ತೊಡಿಕೊಂಡರು.

‘ಬಿಸಿಯೂಟವನ್ನು ರಿವಾರ್ಡ್ ಸಂಸ್ಥೆ ಸರಬರಾಜು ಮಾಡುತ್ತಿದೆ. ಪೌರಕಾರ್ಮಿಕರಿಗೆ ವಿತರಿಸಿದ ಪಲಾವ್‌ ಅನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪೌರಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆಯುತ್ತೇನೆ’ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ತಿಳಿಸಿದರು.

‘ಆಹಾರದ ಗುಣಮಟ್ಟದ ಬಗ್ಗೆ ಹಲವಾರು ದೂರುಗಳು ಬಂದಿವೆ. ಇಂತಹ ಆಹಾರ ಪೂರೈಕೆಯನ್ನು ಪಾಲಿಕೆ ನಿಲ್ಲಿಸಬೇಕು. ಅದರ ಬದಲು ಅವರ ಸಂಬಳದಲ್ಲಿ ಹೆಚ್ಚುವರಿ ₹50 ನೀಡಬೇಕು’ ಎಂದು ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.