ADVERTISEMENT

ನನ್ನ ವಿರುದ್ಧ ಸ್ವಪಕ್ಷೀಯರದ್ದೇ ಷಡ್ಯಂತ್ರ: ಶಾಸಕ ಸತೀಶ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 22:33 IST
Last Updated 22 ಜೂನ್ 2021, 22:33 IST

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಹಾಸಿಗೆ ಬ್ಲಾಕಿಂಗ್ ಹಗರಣ ಬಯಲಿಗೆಳೆದ ಬಳಿಕ ನನ್ನ ವಿರುದ್ಧ ನಮ್ಮ ಪಕ್ಷದ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಈ ಸಂಬಂಧ ವರಿಷ್ಠರಿಗೆ ದೂರು ನೀಡಲು ನಿರ್ಧರಿಸಿದ್ದೇನೆ’ ಎಂದು ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಹೇಳಿದ್ದಾರೆ.

‘ಈಗಾಗಲೇ ಈ ಸಂಬಂಧ ಪಕ್ಷದ ಅಧ್ಯಕ್ಷರು ಮತ್ತು ಕೆಲವು ಹಿರಿಯರಿಗೆ ದೂರು ನೀಡಿದ್ದೇನೆ. ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಆಗಿರುವ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತಂದಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದ ಅವರು, ‘ಮುಂಬರುವ ದಿನಗಳಲ್ಲಿ ಈ ಕುರಿತು ಸುದ್ದಿಗೋಷ್ಠಿ ಕರೆದು ಎಲ್ಲ ಮಾಹಿತಿಗಳನ್ನು ನೀಡುತ್ತೇನೆ’ ಎಂದರು.

ADVERTISEMENT

‘ನಾವು ಸುಮಾರು 4,500 ಹಾಸಿಗೆ ಬ್ಲಾಕಿಂಗ್‌ ಹಗರಣವನ್ನು ಬಯಲಿಗೆಳೆದೆವು. ಆದರೆ, ದಂಧೆ ಬಯಲಿಗೆಳೆದ ನಮ್ಮ ಮೇಲೆ ಆರೋಪ ಬರುವಂತೆ ಮಾಡಲಾಯಿತು. ಇದರ ಹಿಂದೆ ನಮ್ಮ ಪಕ್ಷದವರೂ ಸೇರಿ ಹಲವರ ಷಡ್ಯಂತ್ರವಿದೆ. ಬೊಮ್ಮನಹಳ್ಳಿ ಬಾಬು ಈ ದಂಧೆ ಮಾಡಿದ್ದು ಎಂದು ಹೇಳಲಾಗಿದೆ. ಈತನಿಗೂ ನನಗೂ ಸಂಪರ್ಕವೇ ಇಲ್ಲ. ಆತ ಯಾರಿಗೆ ಆಪ್ತ? ಕನಿಷ್ಠ ಆರು ತಿಂಗಳಾದರೂ ಜತೆಗಿದ್ದರೆ ಆಪ್ತ ಎನ್ನಬಹುದು. ಸುಖಾಸುಮ್ಮನೆ ಆತನ ಹೆಸರನ್ನು ನನ್ನ ಜತೆಗೆ ಗಂಟು ಹಾಕಲಾಗಿದೆ’ ಎಂದರು.

ಕೋವಿಡ್‌ ಎರಡನೇ ಅಲೆಯ ಸಂದರ್ಭ ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಹಾಹಾಕಾರ ಎದ್ದಾಗ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್‌ ರೆಡ್ಡಿ, ರವಿಸುಬ್ರಹ್ಮಣ್ಯ ಮತ್ತು ಉದಯ್‌ ಗರುಡಾಚಾರ್‌ ಸೇರಿ ಹಾಸಿಗೆ ಬ್ಲಾಕಿಂಗ್‌ ಹಗರಣ ಬಯಲಿಗೆಳೆದಿದ್ದರು.

ಬಳಿಕ ಸತೀಶ್‌ ರೆಡ್ಡಿ ಆಪ್ತರೇ ಹಾಸಿಗೆ ಬ್ಲಾಕಿಂಗ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಇದೀಗ ಸ್ವಪಕ್ಷೀಯರೇ ತಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.