ADVERTISEMENT

ಇನ್‌ಸ್ಟಾಗ್ರಾಂ ಸ್ನೇಹ; ಬಾಲಕಿಗೆ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 16:34 IST
Last Updated 20 ಡಿಸೆಂಬರ್ 2020, 16:34 IST

ಬೆಂಗಳೂರು: ‘ಇನ್‌ಸ್ಟಾಗ್ರಾಂ’ ಆ್ಯಪ್‌ನಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡು ಸ್ನೇಹಿತನಾಗಿದ್ದ ಆರೋಪಿಯೊಬ್ಬ, ಬಾಲಕಿಗೆ ತನ್ನ ಖಾಸಗಿ ವಿಡಿಯೊ ಮತ್ತು ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬ್ಲ್ಯಾಕ್‌ಮೇಲ್ ಬಗ್ಗೆ ಬಾಲಕಿಯ ಪೋಷಕರು ಇ–ಮೇಲ್ ಮೂಲಕ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘13 ವರ್ಷದ ಬಾಲಕಿ, ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಖಾತೆ ಹೊಂದಿದ್ದಾಳೆ. ಕೆಲ ತಿಂಗಳ ಹಿಂದಷ್ಟೇ ಆಕೆಗೆ, ಅಪರಿಚಿತ ವ್ಯಕ್ತಿಯೊಬ್ಬ ಪರಿಚಯವಾಗಿ ಸ್ನೇಹ ಬೆಳೆದಿತ್ತು. ನಿತ್ಯವೂ ಚಾಟಿಂಗ್ ಮಾಡುತ್ತಿದ್ದ ಆರೋಪಿ, ತನ್ನ ಅಶ್ಲೀಲ ಫೋಟೊ ಹಾಗೂ ವಿಡಿಯೊಗಳನ್ನು ಬಾಲಕಿಗೆ ಕಳುಹಿಸಿದ್ದ. ಬಾಲಕಿಗೂ ಫೋಟೊ ಮತ್ತು ವಿಡಿಯೊ ಕಳುಹಿಸುವಂತೆ ಒತ್ತಾಯಿಸುತ್ತಿದ್ದ’ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಆರೋಪಿ ವರ್ತನೆಯಿಂದ ಗಾಬರಿಗೊಂಡ ಬಾಲಕಿ, ಆತನ ಖಾತೆಯನ್ನು ಬ್ಲಾಕ್ ಮಾಡಿ ರಿಪೋರ್ಟ್ ಮಾಡಿದ್ದರು. ಮತ್ತೊಂದು ನಕಲಿ ಖಾತೆ ಸೃಷ್ಟಿಸಿ ಬಾಲಕಿಗೆ ಸಂದೇಶ ಕಳುಹಿಸಲಾರಂಭಿಸಿದ್ದ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಬಾಲಕಿಯು ಪೋಷಕರಿಗೆ ಮಾಹಿತಿ ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.