ADVERTISEMENT

₹ 3.44 ಲಕ್ಷ ಕಿತ್ತ ಇನ್‌ಸ್ಟಾಗ್ರಾಮ್ ಗೆಳತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:22 IST
Last Updated 22 ಜುಲೈ 2021, 20:22 IST

ಬೆಂಗಳೂರು: ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಮ್‌’ ಆ್ಯಪ್‌ ಮೂಲಕ ಪರಿಚಯವಾಗಿದ್ದ ಯುವತಿಯೊಬ್ಬಳು ಉಡುಗೊರೆ ಆಮಿಷವೊಡ್ಡಿ ನಗರದ ನಿವಾಸಿಯೊಬ್ಬರಿಂದ ₹ 3.44 ಲಕ್ಷ ಪಡೆದು ವಂಚಿಸಿದ್ದಾಳೆ.

‘ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ 35 ವರ್ಷದ ವ್ಯಕ್ತಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ವಾಟ್ಸನ್ ಪಾರಿಸೆ ಎಂಬಾಕೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಇನ್‌ಸ್ಟಾಗ್ರಾಮ್‌ ಆ್ಯಪ್‌ನಲ್ಲಿ ಖಾತೆ ತೆರೆದಿದ್ದರು. ಅಲ್ಲಿಯೇ ಯುವತಿ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಇಬ್ಬರೂ ಆ್ಯಪ್‌ನಲ್ಲಿ ಮಾತುಕತೆ ನಡೆಸಲಾರಂಭಿಸಿದ್ದರು. ‘ನಿನ್ನ ಸ್ನೇಹ ನನಗೆ ತುಂಬಾ ಇಷ್ಟವಾಗಿದೆ. ಸ್ನೇಹದ ಸಂಕೇತವಾಗಿ ನಿನಗೊಂದು ಉಡುಗೊರೆ ಕಳುಹಿಸುತ್ತೇನೆ’ ಎಂದು ಯುವತಿ ಹೇಳಿದ್ದಳು.’

ADVERTISEMENT

‘ಕೆಲ ದಿನಬಿಟ್ಟು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತ, ‘ವಾಟ್ಸನ್ ಪಾರಿಸೆ ಎಂಬುವರು ನಿಮ್ಮ ಹೆಸರಿಗೆ ಬೆಲೆಬಾಳುವ ಉಡುಗೊರೆಗಳನ್ನು ಕಳುಹಿಸಿದ್ದಾರೆ. ಕೆಲ ಶುಲ್ಕಗಳನ್ನು ಪಾವತಿ ಮಾಡಿದರೆ ನಿಮ್ಮ ವಿಳಾಸಕ್ಕೆ ಉಡುಗೊರೆ ಕಳುಹಿಸಲಾಗುವುದು’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 3.44 ಲಕ್ಷ ಹಾಕಿದ್ದರು. ಅದಾದ ನಂತರ ಯಾವುದೇ ಉಡುಗೊರೆ ಬಂದಿಲ್ಲ. ಇನ್‌ಸ್ಟಾಗ್ರಾಮ್ ಗೆಳತಿ ಸಹ ನಾಪತ್ತೆಯಾಗಿದ್ದಾಳೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.