ಪೀಣ್ಯ ದಾಸರಹಳ್ಳಿ: 'ನಾವು ಭೂಮಿಗೆ ಬರಿಗೈಯಲ್ಲಿ ಬಂದಿದ್ದೇವೆ. ಭಗವಂತ ಕೊಟ್ಟಿದ್ದನ್ನು ಅನುಭವಿಸುತ್ತಿದ್ದೇವೆ. ನಮ್ಮದೆಲ್ಲ ದೇವರು ಕೊಟ್ಟದ್ದು ಎನ್ನುವ ಕೃತಜ್ಞತೆಯ ಸಮರ್ಪಣೆ, ನಿವೇದನೆಯೇ ನೈವೇದ್ಯ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.
ಸಿಡೇದಹಳ್ಳಿಯ ಸೌಂದರ್ಯ ನಗರದಲ್ಲಿ ಸೌಂದರ್ಯ ಟೆಂಪಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಪೂಜೆ ನೆರವೇರಿಸಿ ಮಾತನಾಡಿದರು.
‘ದೇವರು ನಿರ್ಮಿಸಿದ ಭೂಮಿಯಲ್ಲಿ ಭವ್ಯ ಮಂದಿರ ಕಟ್ಟಿ, ಟ್ರಸ್ಟ್ ಅಧ್ಯಕ್ಷ ಮಂಜಪ್ಪನವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿದ್ದಾರೆ 'ಎಂದರು.
‘ಬದುಕಿನ ಸಾರಥ್ಯವನ್ನು ಭಗವಂತನಿಗೆ ಕೊಟ್ಟು ಕರ್ತವ್ಯ ನಿರತರಾದರೆ ಬದುಕು ಸುಭದ್ರ. ನಾವು ಜೀವನದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವುದರ ಮೂಲಕ ಭಗವಂತನ ಸಾಮೀಪ್ಯ ಪಡೆಯುತ್ತೇವೆ. ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು’ ಎಂದು ಉಪದೇಶಿಸಿದರು.
ಟೆಂಪಲ್ ಟ್ರಸ್ಟ್ ಅಧ್ಯಕ್ಷ ಸೌಂದರ್ಯ ಮಂಜಪ್ಪ ಮಾತನಾಡಿ, ‘ದೇವರ ಮೂರ್ತಿಯನ್ನು ಮಹಾಬಲಿಪುರಂನಿಂದ ತಂದು, ಇಲ್ಲಿ ಮೆರವಣಿಗೆಯಲ್ಲಿ ತರಲಾಯಿತು. ದೇವಸ್ಥಾನದ ಜಾಗ ಅತಿಕ್ರಮಣವಾಗಿತ್ತು. ದೈವಾನುಗ್ರಹದಿಂದ ವ್ಯಾಜ್ಯ ತೀರ್ಮಾನವಾಗಿ ಎಲ್ಲರ ಸಹಕಾರದಿಂದ ಮಂದಿರ ನಿರ್ಮಾಣವಾಗಿದೆ. ದೇವಸ್ಥಾನದಲ್ಲಿ ಧರ್ಮ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.
ಮಂಗಳೂರು ಶೈಲಿಯಲ್ಲಿ ಮಂದಿರ ನಿರ್ಮಾಣವಾಗಿದೆ. ಒಂದು ವಾರ, ನಿರಂತರ ಮೂರು ಹೊತ್ತು ಅನ್ನ ಪ್ರಸಾದ ನೀಡಲಾಗುತ್ತಿದೆ. ಸಂಗೀತ, ಸಾಂಸ್ಕೃತಿಕ ಕಾರ್ಯಗಳು ನಡೆಯುತ್ತಿದೆ ಎಂದರು.
ವಕೀಲ ಪ್ರಶಾಂತ್ ಚಂದ್ರ, ಬಿ.ಎಂ.ಹೆಗಡೆ, ಸಾಯಿರಾಮ್ ಪ್ರಸಾದ್, ಎಫ್‌ಕೆಸಿಸಿಐ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ, ಜನಾರ್ದನ, ರವೀಂದ್ರ, ಟೆಂಪಲ್ ಧರ್ಮದರ್ಶಿ ಸುನಿತಾ ಮಂಜಪ್ಪ, ಎಂ.ಕೀರ್ತನ್ ಕುಮಾರ್, ವರುಣ್ ಕುಮಾರ್, ಪ್ರತೀಕ್ಷಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.