ADVERTISEMENT

ಕಾರಿನ ಮೇಲೆ ಬಿದ್ದ ಕಬ್ಬಿಣದ ತುಂಡು: ಮೆಟ್ರೊ ಅವಘಡ ಎಂದು ದೂರು ನೀಡಿದ ಮಾಲೀಕ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:30 IST
Last Updated 25 ಫೆಬ್ರುವರಿ 2023, 22:30 IST
   

ಬೆಂಗಳೂರು: ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಸ್ಯಾಂಡಲ್‌ ಸೋಪ್‌ ಫಾಕ್ಟರಿ ಮೆಟ್ರೊ ನಿಲ್ದಾಣದ ಮೇಲಿಂದ ಕಬ್ಬಿಣದ ತುಂಡು ಬಿದ್ದು, ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ ಎಂದು ಆರೋಪಿಸಿ ರಿತೇಶ್‌ ಎಂಬಾತ ಸುಬ್ರಹ್ಮಣ್ಯ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರಿನ ಬ್ಯಾನೆಟ್‌ ಹಾಗೂ ಗ್ಲಾಸ್‌ ಮೇಲೆ ಕಬ್ಬಿಣದ ತುಂಡು ಬಿದ್ದಿದೆ ಎಂದು ಅವರು ಆರೋಪಿಸಿದ್ದಾರೆ.

‘ದೂರಿನ ಮೇರೆಗೆ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ಮಾತ್ರ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು
ತಿಳಿಸಿವೆ.

ADVERTISEMENT

‘ಮೆಟ್ರೊ ನಿಲ್ದಾಣದ ಕೆಳಗಿನ ರಸ್ತೆಯಲ್ಲಿ ಶುಕ್ರವಾರ ಬರುತ್ತಿರುವಾಗ ಮೇಲಿಂದ ಕಬ್ಬಿಣದ ತುಂಡು ಬಿದ್ದಿದೆ. ಬಿ.ಎಂ.ಆರ್‌.ಸಿ.ಎಲ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ಅಪಾಯದಿಂದ ನಾನು ಪಾರಾಗಿದ್ದೇನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ರಿತೇಶ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬಂದು, ಕಾರಿನ ಮೇಲೆ ಬಿದ್ದ ಕಬ್ಬಿಣ ತೋರಿಸುವಂತೆ ಹೇಳಲಾಗಿತ್ತು. ‌ಆದರೆ, ಅವರು ಬಂದಿಲ್ಲ. ಬಿದ್ದಿದ್ದ ಕಬ್ಬಿಣವನ್ನೂ ತೋರಿಸಿಲ್ಲ. ಬಿದ್ದ ಕಬ್ಬಿಣದ ಗಾತ್ರ ಹಾಗೂ ಸ್ಥಳ ತೋರಿಸಿದರೆ ಮುಂದಿನ ತನಿಖೆ ನಡೆಸಲು ಸಾಧ್ಯವಾಗಲಿದೆ’ ಎಂದು ಮೂಲಗಳು ಹೇಳಿವೆ.

‘ಪೊಲೀಸರು ತನಿಖೆ ನಡೆಸಲಿ’

ಈ ನಿಲ್ದಾಣದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಹಳೇ ನಿಲ್ದಾಣ ಆಗಿರುವುದರಿಂದ ಯಾವುದೇ ವಸ್ತು ಬೀಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾರಿನ ಮೇಲೆ ಬಿದ್ದಿರುವ ವಸ್ತು ಏನು ಮತ್ತು ಎಲ್ಲಿಂದ ಬಿದ್ದಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಿ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.