ADVERTISEMENT

ನಗರದಲ್ಲಿ ಯುವ ಉದ್ಯಮಿಗಳ ಸಂಖ್ಯೆ ಹೆಚ್ಚಳ: ಇ.ವಿ. ರಮಣ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:25 IST
Last Updated 21 ಆಗಸ್ಟ್ 2019, 20:25 IST
ವಸ್ತು ಪ್ರದರ್ಶನವನ್ನು ಕೆನಡಾ ದೂತವಾಸದ ಅಧಿಕಾರಿ ನಿಕೋಲ್ ಗಿರಾರೆ ವೀಕ್ಷಿಸಿದರು. ಇ.ವಿ.ರಮಣ ರೆಡ್ಡಿ, ಸಿಐಐ ಕರ್ನಾಟಕದ ಉಪಾಧ್ಯಕ್ಷ ಟಿ. ಸಂದೀಪ್ ಸಿಂಗ್, ರೇಖಾ ಮೆನನ್ ಇದ್ದರು –ಪ್ರಜಾವಾಣಿ ಚಿತ್ರ
ವಸ್ತು ಪ್ರದರ್ಶನವನ್ನು ಕೆನಡಾ ದೂತವಾಸದ ಅಧಿಕಾರಿ ನಿಕೋಲ್ ಗಿರಾರೆ ವೀಕ್ಷಿಸಿದರು. ಇ.ವಿ.ರಮಣ ರೆಡ್ಡಿ, ಸಿಐಐ ಕರ್ನಾಟಕದ ಉಪಾಧ್ಯಕ್ಷ ಟಿ. ಸಂದೀಪ್ ಸಿಂಗ್, ರೇಖಾ ಮೆನನ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಂದುವರಿದ ತಂತ್ರಜ್ಞಾನವು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದ್ದು, ನಗರದಲ್ಲಿ ಕಿರಿಯ ಉದ್ಯಮಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ’ ಎಂದು ಐಟಿ- ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ತಿಳಿಸಿದರು.

ಸಿಐಐ ನಗರದಲ್ಲಿ ಬುಧವಾರ ಆಯೋಜಿಸಿದ್ದ 15ನೇ ಭಾರತೀಯ ಆವಿಷ್ಕಾರ ಸಭೆಯಲ್ಲಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳಲ್ಲಿ ಯುವ ಸಮೂಹಕ್ಕೆ ಕೌಶಲ ವೃದ್ಧಿಸಲಾಗುತ್ತಿದೆ. ನವೋದ್ಯಮಗಳ ಆರಂಭಕ್ಕೆ ನಗರ ಉತ್ತಮ ಆಯ್ಕೆಯಾಗಿದ್ದು, ಹೊಸ ಯೋಚನೆಗಳನ್ನು ಮುನ್ನೆಲೆಗೆ ಕೊಂಡೊಯ್ಯಲು ಸರ್ಕಾರ ಕೂಡ ಆರ್ಥಿಕ ಸಹಾಯ ಮಾಡುತ್ತಿದೆ. ಇದರಿಂದಾಗಿ ನಗರದಲ್ಲಿನ ಉದ್ಯಮಿಗಳವಯೋಮಿತಿ ಸರಾಸರಿ 28 ಆಗಿದ್ದು, ವಿಶ್ವದಲ್ಲಿಯೇ ಅತಿ ಕಿರಿಯ ಉದ್ಯಮಿಗಳನ್ನು ಹೊಂದಿದ ಹಿರಿಮೆಗೆ ಭಾಜನವಾಗಿದೆ. ಸಿಲಿಕಾನ್ ವ್ಯಾಲಿಯಲ್ಲಿನ ಉದ್ಯಮಿಗಳ ವಯೋಮಿತಿ ಸರಾಸರಿ 36.5 ಆಗಿದೆ’ ಎಂದರು.

‘ಪರಿಸರಸ್ನೇಹಿ ನವೋದ್ಯಮದಲ್ಲಿ ಈ ಬಾರಿ 11ನೇ ಸ್ಥಾನವನ್ನು ಬೆಂಗಳೂರು ಪಡೆದಿದ್ದು, ಈ ವಿಭಾಗದ ಬೆಳವಣಿಗೆಯಲ್ಲಿ ನಗರ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ. ಎಲಿವೆಟ್‌ ಯೋಜನೆಯಡಿ 260 ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲಾಗಿದೆ’ ಎಂದರು.

ADVERTISEMENT

ಆಕ್ಸೆಂಚರ್‌ನ ಅಧ್ಯಕ್ಷೆ ರೇಖಾ ಮೆನನ್, ‘ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಅಳವಡಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಆವಿಷ್ಕಾರದ ಕೇಂದ್ರವಾಗಿ ಬೆಳೆಯುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೂಡ ತಂತ್ರಜ್ಞಾನ ಅಳವಡಿಕೆ ದೇಶದ ಪ್ರಗತಿಗೆ ಸಹಕಾರಿಯಾಗಿದೆ’ ಎಂದರು.

ವಿಮಾನ ನಿಲ್ದಾಣದ ಮಾದರಿ ಪ್ರದರ್ಶನ

ಆಕ್ಸೆಂಚರ್‌, ಇನ್ಫೊಸಿಸ್, ಟಾಟಾ, ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸೊಸೈಟಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಂಪನಿಗಳು ಹಾಗೂ ಸಂಸ್ಥೆಗಳ 20ಕ್ಕೂ ಅಧಿಕ ಮಳಿಗೆಗಳಿವೆ. ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನ ಮಾದರಿಯನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಅದೇ ರೀತಿ, ಮುಖ ಚಹರೆಯನ್ನು ಗುರುತಿಸುವ ವ್ಯವಸ್ಥೆಯ ಯಂತ್ರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.